ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯವು ಜೂನ್ 16ರಂದು ಏರ್ಪಡಿಸಿರುವ 31 ಮತ್ತು 32ನೇ ಘಟಿಕೋತ್ಸವದಲ್ಲಿ ಸಾರ್ವಜನಿಕ ಆಡಳಿತದಲ್ಲಿ ಅಪಾರ ಸೇವೆ ಸಲ್ಲಿಸಿರುವ ಹಾಗೂ ವಿಧಾನಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಸೇರಿ ಒಟ್ಟು 6 ಮಂದಿಗೆ ಗೌರವ ಡಾಕ್ಟರೇಟ್ ನೀಡಲು ತೀರ್ಮಾನಿಸಲಾಗಿದೆ. ಎರಡು ಘಟಿಕೋತ್ಸವಗಳಿಂದ ಒಟ್ಟು ಆರು ಸಾಧಕರಿಗೆ ಗೌರವ ಡಾಕ್ಟರೇಟ್ ನೀಡಲು ನಿರ್ಧರಿಸಲಾಗಿದೆ ಎಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಅವರು ತಿಳಿಸಿದ್ದಾರೆ.
ಕೊರೊನಾ ಹಾವಳಿ ಹಾಗೂ ಅತಿಥಿಗಳ ಸಮಯ ಹೊಂದಾಣಿಕೆ ಸಾಧ್ಯವಾಗದ ಕಾರಣ ನೆನಗುದಿಗೆ ಬಿದ್ದಿದ್ದ ವಿವಿಯ ಎರಡು ವರ್ಷದ ಶೈಕ್ಷಣಿಕ ಘಟಿಕೋತ್ಸವವನ್ನು ಪ್ರಸ್ತುತ ಜೂನ್16ರಂದು ಒಂದೇ ದಿನ ನಡೆಸಲು ವಿಶ್ವವಿದ್ಯಾಲಯವು ಮುಂದಾಗಿದೆ. 2019-20 ಮತ್ತು 2020-21ನೇ ಸಾಲಿನ ಘಟಿಕೋತ್ಸವಗಳನ್ನು ರಾಜ್ಯಪಾಲರ ಅನುಮತಿ ಮೇರೆಗೆ ಒಂದೇ ದಿನ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.
31ನೇ ಘಟಿಕೋತ್ಸವದ ಭಾಗವಾಗಿ ವಿಧಾನಪರಿಷತ್ ಮಾಜಿ ಸಭಾಪತಿ ಡಿ ಹೆಚ್ ಶಂಕರಮೂರ್ತಿ, ಶಿಕ್ಷಣತಜ್ಞೆ ಗೀತಾ ನಾರಾಯಣನ್ ಹಾಗೂ ಯೋಗ ಗುರು ಭ. ಮ. ಶ್ರೀಕಂಠ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತದೆ. 32ನೇ ಘಟಿಕೋತ್ಸವದ ಭಾಗವಾಗಿ ಶಿಕ್ಷಣತಜ್ಞ, ಆಂಧ್ರಪ್ರದೇಶದ ಕೇಂದ್ರ ಬುಡಕಟ್ಟು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಟಿ. ವಿ. ಕಟ್ಟಿಮನಿ, ಅಂಧ ಕ್ರಿಕೆಟಿಗ ಮಹಾಂತೇಶ್ ಜಿ. ಕಿವಡಸಣ್ಣವರ್, ಯೋಗಗುರು ಬಾ. ಸು. ಅರವಿಂದ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಇದನ್ನೂ ಓದಿ: ನಾಳೆಯಿಂದ ಸಿಇಟಿ: ಗ್ಯಾಜೆಟ್ ತರುವಂತಿಲ್ಲ-ತಲೆ, ಕಿವಿ ಮುಚ್ಚುವ ಬಟ್ಟೆ ಧರಿಸುವಂತಿಲ್ಲ