ಶಿವಮೊಗ್ಗ: ಬಸವರಾಜ್ ಯತ್ನಾಳ್ ನೀಡಿರುವ ಹೇಳಿಕೆ ಬಗ್ಗೆ ಹೋರಾಟಗಾರ ದೊರೆಸ್ವಾಮಿ ಅವರು ಒಮ್ಮೆ ಯೋಚನೆ ಮಾಡಬೇಕಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸ್ವಾತಂತ್ರ್ಯ ಹೊರಾಟಗಾರರಾಗಿರುವವರು ಯಾವುದೋ ಒಂದು ಪಕ್ಷದ ಪರವಾಗಿ ಹೇಳಿಕೆ ನೀಡಬಾರದು. ಹೀಗೆ ಒಂದು ಪಕ್ಷದ ಪರವಾಗಿ ಮಾತನಾಡಿದ್ರೆ ಗೌರವ ಹೇಗೆ ಉಳಿಯುತ್ತದೆ. ಸ್ವಾತಂತ್ರ್ಯ ಹೋರಾಟಗಾರರು ಪಕ್ಷತೀತವಾಗಿರಬೇಕು. ಕಾಂಗ್ರೆಸ್ನವರ ಹೇಳಿಕೆಗಳಿಗೆ ಇವರು ಬೆಂಬಲ ನೀಡುವುದನ್ನು ನಾನು ಒಪ್ಪುವುದಿಲ್ಲ ಎಂದರು.
ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಧರಣಿ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಕೊಲೆಗಡುಕ ಎಂಬ ಹೇಳಿಕೆಯನ್ನು ನೀಡಿದ್ದಾರೆ. ನೋಡದಾದ್ರೆ ಸಿದ್ದರಾಮಯ್ಯ ಅವರನ್ನು ಪಕ್ಷದಿಂದ ಹೊರ ಹಾಕಬೇಕಿತ್ತು. ಆದರೆ, ಅವರೇ ಈಗ ಯತ್ನಾಳ್ ಕ್ಷಮೆ ಕೇಳದೆ ಹೋದ್ರೆ ಸದನ ನಡೆಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಅದು ಹೇಗೆ ಬಿಡುವುದಿಲ್ಲವೊ ನಾವು ನೋಡುತ್ತೇವೆ. ವಿದಾನಸೌಧ ಜನರಿಂದ ಜನರ ಪರವಾಗಿ ಕೆಲಸ ಮಾಡಲು ಇರುವಂತಹ ಸ್ಥಳ. ಇವರ ಸ್ವಂತ ಆಸ್ತಿ ಅಲ್ಲ. ರಾಜಕೀಯ ಬೇಳೆ ಬೇಯಿಸಿಕೊಳ್ಳುವಂತಹ ಸ್ಥಳವಲ್ಲ ಎಂದು ಗುಡುಗಿದ್ರು.
ಕಾಂಗ್ರೆಸ್ ನವರಿಗೆ ತಮ್ಮ ಎಐಸಿಸಿ ಹಾಗೂ ಕೆಪಿಸಿಸಿ ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಇವರು ಸರ್ವಾಧಿಕಾರಿ ಹೇಳಿಕೆ ನೀಡುವುದನ್ನು ಬಿಡಬೇಕು. ದೊರೆಸ್ವಾಮಿರವರು ಯತ್ನಾಳ್ ಹೇಳಿಕೆಯನ್ನು ಒಮ್ಮೆ ಯೋಚಿಸಬೇಕಿದೆ. ದೊರೆಸ್ವಾಮಿ ಅವರು ಕಾಂಗ್ರೆಸ್ ಪರವಾಗಿ ಇರದೇ, ಪಾಕ್ ಪರ ಘೋಷಣೆ ಹಾಕಿದವರ ವಿರುದ್ಧ ಪ್ರತಿಭಟನೆ ನಡೆಸಿದ್ದರೆ ನಾವು ಅವರ ಪರವಾಗಿ ಹೋರಾಟ ನಡೆಸುತ್ತಿದ್ದವು ಎಂದರು.
ಸಿಎಂಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ ಈಶ್ವರಪ್ಪ: ಯಡಿಯೂರಪ್ಪ ಅವರದ್ದು ಹೋರಾಟದ ಜೀವನ, ಬಡವರ, ಬಗರ್ ಹುಕುಂದಾರರ ಪರವಾಗಿ, ರೈತರ ಪರವಾಗಿ ಹೋರಾಟ ಮಾಡಿಕೊಂಡು ಬಂತಹ ವ್ಯಕ್ತಿ. ಅವರು ದೇಶದ ತುರ್ತು ಪರಿಸ್ಥಿತಿಯಲ್ಲಿ ಸೆರೆವಾಸ ಅನುಭವಿಸಿದ್ದರು. ಬಡವರ ಪರ, ರೈತಪರ ಹೋರಾಟ ಮಾಡಿಕೊಂಡು ಬಂದಂತಹವರು ಇಂದು ರಾಜ್ಯದ ಸಿಎಂ ಆಗಿದ್ದಾರೆ. ಬರುವ ದಿನಗಳಲ್ಲಿ ಅವರಿಗೆ ದೇವರು ಇನ್ನಷ್ಟು ಆರೋಗ್ಯ, ಅಧಿಕಾರ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು.