ಶಿವಮೊಗ್ಗ: ಯಾವುದೇ ಕ್ರೀಡೆಯಿರಲಿ ಅದರಲ್ಲಿ ಅತ್ಯುನ್ನತ ಸಾಧನೆ ಮಾಡಿದ ಸಾಧಕರಿಗೆ ಸರ್ಕಾರದಿಂದ ಪ್ರತಿ ವರ್ಷವೂ ಪ್ರಶಸ್ತಿ ನೀಡಲಾಗುತ್ತದೆ. ಅದೇ ರೀತಿ ಅತ್ಯುತ್ತಮ ಕೋಚ್ಗಳಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗುತ್ತದೆ. ಆದರೆ ಕರ್ನಾಟಕದ ಇತಿಹಾಸದಲ್ಲಿ ಇದುವರೆಗೆ ಖೋಖೋ ಕೋಚ್ ಒಬ್ಬರಿಗೆ ಜೀವಮಾನ ಪ್ರಶಸ್ತಿ ಬಂದ ಉದಾಹರಣೆಯೇ ಇರಲಿಲ್ಲ. ಆದರೆ ಇದೇ ಮೊದಲ ಬಾರಿಗೆ ಈ ವರ್ಷ ಖೋಖೋ ಕೋಚ್ ಒಬ್ಬರಿಗೆ ಜೀವಮಾನ ಸಾಧನೆಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ.
ಶಾಲಾ-ಕಾಲೇಜು ದಿನಗಳಲ್ಲಿ ವಿದ್ಯಾರ್ಥಿಗಳು ಖೋಖೋ ಆಡುವುದನ್ನು ಹೊರತುಪಡಿಸಿದರೆ ಪ್ರೊಫೆಷನಲ್ ಆಗಿ ಖೋಖೋ ಆಡುವವರ ಸಂಖ್ಯೆ ಅತಿ ವಿರಳ. ಆದರೆ ಶಿವಮೊಗ್ಗದ ಸಂಜೀವ್ ಆರ್. ಕನಕ ಎಂಬುವರು ಕಳೆದ 35 ವರ್ಷಗಳಿಂದಲೂ ಖೋಖೋ ಕ್ರೀಡೆಯನ್ನು ತಮ್ಮ ಜೀವನವನ್ನಾಗಿಸಿಕೊಂಡಿದ್ದಾರೆ. ಖೋಖೋ ಕೋಚ್ ಆಗಿರುವ ಸಂಜೀವ್ ತಮ್ಮ ಶಿಷ್ಯರನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟಕ್ಕೂ ಬೆಳೆಸಿದ್ದಾರೆ. ಆಲ್ಲದೆ ಸಂಜೀವ್ ಅವರು ತಮ್ಮ ಜೀವನವನ್ನೇ ಖೋಖೋಗಾಗಿ ಮುಡಿಪಾಗಿಟ್ಟಿದ್ದರ ಫಲವಾಗಿ ಇಂದು ಖೋಖೋ ಕೋಚ್ ಒಬ್ಬರಿಗೆ ಇದೇ ಮೊದಲ ಬಾರಿಗೆ ಜೀವಮಾನ ಸಾಧನೆಗೆ ಪ್ರಶಸ್ತಿ ಸಿಕ್ಕಿದೆ.
ಸಂಜೀವ್ ಕುಮಾರ್ ಅವರು 9ನೇ ತರಗತಿಯಲ್ಲಿದ್ದಾಗಲೇ ಖೋಖೋ ಆಡಲು ಆರಂಭಿಸಿದ್ದರು. ಅಂದು ಆರಂಭಗೊಂಡಿದ್ದ ಫ್ರೆಂಡ್ಸ್ ರಿಕ್ರಿಯೇಷನ್ ಸ್ಪೋರ್ಟ್ಸ್ ಕ್ಲಬ್ಗಾಗಿ ಆರಂಭದಲ್ಲಿ ಸಂಜೀವ್ ಆಡಲಾರಂಭಿಸಿದ್ದರು. ಬಳಿಕ ಇದೇ ಕ್ಲಬ್ನಲ್ಲಿಯೇ ಕೋಚ್ ಆಗಿ ಕಾರ್ಯನಿರ್ವಹಿಸಲಾರಂಭಿಸಿದರು. ಸಂಜೀವ್ ಅವರಿಗೆ ಮನೆಯಲ್ಲಿಯೂ ಪ್ರೋತ್ಸಾಹ ಸಿಕ್ಕಿದ್ದರಿಂದಾಗಿ ತಿಂಗಳುಗಟ್ಟಲೆ ಖೋಖೋಗಾಗಿ ದೇಶ-ವಿದೇಶ ಸುತ್ತಾಟ ನಡೆಸಿ ಈ ಮಟ್ಟಕ್ಕೆ ಬೆಳೆಯಲು ಸಾಧ್ಯವಾಗಿದೆ. ಸೇವೆಯನ್ನು ಗೌರವಿಸಿ ಪ್ರಶಸ್ತಿ ನೀಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿಯೂ ಖೋಖೋ ಕ್ರೀಡೆಗೆ ಪ್ರೋತ್ಸಾಹ ಸಿಗಲಿ ಎಂದು ಸಂಜಿವ್ ಅವರ ಪತ್ನಿ ಹೇಳಿದ್ದಾರೆ.
ಇದೇ ಮೊದಲ ಬಾರಿಗೆ ಖೊಖೋ ಕೋಚ್ ಒಬ್ಬರಿಗೆ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ಅದೂ ಶಿವಮೊಗ್ಗದ ಕೋಚ್ ಒಬ್ಬರಿಗೆ ಲಭಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಖೋಖೋ ಕ್ರೀಡೆಯ ಕೀರ್ತಿಯನ್ನು ಪ್ರಶಸ್ತಿ ಪಡೆಯುವ ಮೂಲಕ ಸಂಜೀವ್ ಕುಮಾರ್ ಎತ್ತಿ ಹಿಡಿದಿದ್ದಾರೆ.