ಶಿವಮೊಗ್ಗ: ನಗರದ ಬೈಪಾಸ್ ರಸ್ತೆಯಲ್ಲಿ ತುಂಗಾ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದ್ದ ನಾಲ್ಕನೇ ನೂತನ ಸೇತುವೆಯನ್ನು ಇಂದು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸಿದರು. ಸುಮಾರು 20.12 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಸೇತುವೆ 280 ಮೀಟರ್ ಉದ್ದ ಹಾಗು 12 ಮೀಟರ್ ಅಗಲವಿದೆ.
ಬಿ.ವೈ.ರಾಘವೇಂದ್ರ ಮಾತನಾಡಿ, ಈ ಸೇತುವೆಯು ಜನರ ಉಪಯೋಗಕ್ಕೆ ಅವಶ್ಯವಾಗಿ ಬೇಕಾಗಿತ್ತು. ಈಗ ಇರುವ ಸೇತುವೆ ಸ್ವಲ್ಪ ದುರಸ್ಥಿ ಮಾಡಬೇಕಿದೆ. ಅಲ್ಲದೆ, ಪಕ್ಕದ ಹಳೆ ಸೇತುವೆ ದುರಸ್ಥಿಗೆ 3.75 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದರು.
ವಿಮಾನ ನಿಲ್ದಾಣಕ್ಕೆ ಕುವೆಂಪು ಹೆಸರು ಅಂತಿಮ: ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರಿಡಬೇಕೆಂದು ಈ ಹಿಂದೆ ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗ ತೀರ್ಮಾನ ಮಾಡಲಾಗಿತ್ತು. ಈಗ ವಿಧಾನಸಭೆಯಲ್ಲಿಟ್ಟು ಅದನ್ನು ಪಾಸ್ ಮಾಡಿ ಕೇಂದ್ರಕ್ಕೆ ಕಳುಹಿಸಿಕೊಡಬೇಕಿದೆ. ಇದಕ್ಕಾಗಿ ಸಂಬಂಧಪಟ್ಟ ಸಚಿವರಾದ ಎಂ.ಬಿ.ಪಾಟೀಲರ ಜೊತೆ ಮಾತನಾಡಿ, ಅಧಿವೇಶನದಲ್ಲಿ ಮಂಡಿಸಿ ಕೇಂದ್ರಕ್ಕೆ ಕಳುಹಿಸಲಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಕೇಂದ್ರದಿಂದ ಒಪ್ಪಿಗೆ ಸಿಗಬಹುದು. ಶಿವಮೊಗ್ಗದ ರೈಲ್ವೆ ನಿಲ್ದಾಣಕ್ಕೆ ಕೆಳದಿ ಶಿವಪ್ಪ ನಾಯಕ ಹೆಸರನ್ನು ಶಿಫಾರಸು ಮಾಡಲಾಗಿದೆ. ಇವೆರಡೂ ಅಧಿಕೃತವಾಗಲಿದೆ ಎಂದರು.
ಸೇತುವೆ ಉದ್ಘಾಟನೆಗೆ ಜಿಲ್ಲಾ ಉಸ್ತುವಾರಿ ಮಂತ್ರಿ ಸೇರಿದಂತೆ ಯಾವುದೇ ಅಧಿಕಾರಿಗಳನ್ನು ಆಹ್ವಾನಿಸದೇ ಸಂಸದರು ತಾವೇ ಸೇತುವೆ ಉದ್ಘಾಟಿಸಿರುವುದು ಚರ್ಚೆಗೂ ಕಾರಣವಾಗಿದೆ.
ಈ ಸಂದರ್ಭದಲ್ಲಿ ಶಾಸಕ ಎಸ್.ಎನ್.ಚನ್ನಬಸಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮೇಘರಾಜ್ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ: ಜಮೀನಿನ ಮೇಲೆ ಪವರ್‌ಲೈನ್ ಅಳವಡಿಕೆ: ರೈತರ ಪ್ರತಿಭಟನೆ, ಪರಿಹಾರಕ್ಕೆ ಆಗ್ರಹ