ಬೆಂಗಳೂರು : ಕೊಲೆ ಪ್ರಕರಣವೊಂದರಲ್ಲಿ ಜೀವವಿರುವವರೆಗೂ ಜೈಲು ಶಿಕ್ಷೆಗೆ ಗುರಿಯಾಗಿರುವ ವ್ಯಕ್ತಿಗೆ ಹೈಕೋರ್ಟ್ ಜೀವಾವಧಿ ಶಿಕ್ಷೆಯಾಗಿ ಮಾರ್ಪಡಿಸಿದೆ. ಕೊಲೆ ಆರೋಪದಲ್ಲಿ ಜೀವವಿರುವರೆಗೂ ಜೈಲಿನಲ್ಲಿರುವ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಹಾಸನ ಜಿಲ್ಲೆಯ ದ್ಯಾವಪನಹಳ್ಳಿಯ ನಿವಾಸಿ ಹರೀಶ್ ಮತ್ತು ಮೂರು ವರ್ಷ ಶಿಕ್ಷೆಗೆ ಗುರಿಯಾಗಿದ್ದ ಲೋಕೇಶ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಸೋಮಶೇಖರ್ ಮತ್ತು ನ್ಯಾಯಮೂರ್ತಿ ಕೆ. ರಾಜೇಶ್ ರೈ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಜೀವ ಇರುವವರೆಗೂ ಶಿಕ್ಷೆ ವಿಧಿಸುವ ಪ್ರಕರಣಗಳಲ್ಲಿ ಅತ್ಯಂತ ಕ್ರೂರ ಮತ್ತು ಅಪರೂಪದ ಕೃತ್ಯಗಳಾಗಿರಬೇಕು. ಜೊತೆಗೆ, ಕ್ರೈಂ, ಕ್ರಿಮಿನಲ್ ಮತ್ತು ಅತ್ಯಂತ ಅಪರೂಪದ ಕೃತ್ಯದ ಬಗ್ಗೆ ಪರೀಕ್ಷೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿದೆ. ಈ ಪ್ರಕರಣದಲ್ಲಿ ಕ್ರೈಂ ಮತ್ತು ಕ್ರಿಮಿನಲ್ ಪರೀಕ್ಷೆಗೆ ತೃಪ್ತಿಕರವಾಗಿದೆ. ಆದರೆ, ಅತ್ಯಂತ ಅಪರೂಪದ ಕೃತ್ಯ ಎಂಬುದನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಸಾಕ್ಷ್ಯಾಧಾರಗಳನ್ನು ಒದಗಿಸಲು ವಿಫಲವಾಗಿದೆ ಎಂದು ಪೀಠ ತಿಳಿಸಿದೆ.
ಅಲ್ಲದೇ, ಕೇಂದ್ರ ಸರ್ಕಾರದ ವಿರುದ್ಧದ ವಿ.ಶ್ರೀಹರನ್ ಅಲಿಯಾಸ್ ಮುರುಗನ್ ಮತ್ತಿತರರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ತೀರ್ಪನ್ನು ಉಲ್ಲೇಖಿಸಿರುವ ಹೈಕೋರ್ಟ್, ಅಪರಾಧಿಯೊಬ್ಬರಿಗೆ ಜೀವವಿರುವರೆಗೂ ಶಿಕ್ಷೆ ನೀಡುವಂತಹ ವಿಶೇಷ ಆದೇಶವನ್ನು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ ಮಾತ್ರ ನೀಡಬಹುದಾಗಿದೆ. ಆದರೆ, ವಿಚಾರಣಾ ನ್ಯಾಯಾಲಯಕ್ಕೆ ಈ ರೀತಿಯ ಶಿಕ್ಷೆ ನೀಡುವ ಅಧಿಕಾರವಿಲ್ಲ ಎಂದು ಹೇಳಿದೆ.
ಪ್ರಕರಣದ ಮೊದಲ ಆರೋಪಿ ಹರೀಶ್ಗೆ ಶಿಕ್ಷೆ ನೀಡಿರುವ ಕ್ರಮ ಎತ್ತಿಹಿಡಿದಿರುವ ಹೈಕೋರ್ಟ್, ಆದರೆ, ಸುಪ್ರೀಂಕೋರ್ಟ್ ಆದೇಶದಂತೆ ಆರೋಪಿಗೆ ವಿಚಾರಣಾ ನ್ಯಾಯಾಲಯ ಜೀವವಿವರೆಗೂ ಶಿಕ್ಷೇ ನೀಡಿರುವುದು ಕಾನೂನು ಪ್ರಕಾರ ಸರಿಯಾದ ಕ್ರಮವಲ್ಲ. ಅಲ್ಲದೆ, ಈ ರೀತಿಯ ಪ್ರಕರಣಗಳಲ್ಲಿ ಸೆಷನ್ಸ್ ನ್ಯಾಯಾಲಯ ಜೀವವಿರುವರೆಗೂ ಶಿಕ್ಷೆ ನೀಡುವ ಅಧಿಕಾರವನ್ನು ಚಲಾಯಿಸಲು ಅವಕಾಶವಿಲ್ಲ ಎಂದು ಪೀಠ ತಿಳಿಸಿದೆ.
ಜೊತೆಗೆ ಮೂರನೇ ಆರೋಪಿ ಲೋಕೇಶ್ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವುದು ಮತ್ತು ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಭಿಪ್ರಾಯಪಟ್ಟು ಆರೋಪ ಮುಕ್ತಗೊಳಿಸಿದೆ. ಅಲ್ಲದೆ, ಮೂರನೇ ಆರೋಪಿಯಾಗಿರುವ ಲೋಕೇಶ್ ಅವರಿಗೆ ಒಂದನೇ ಆರೋಪಿ ಹರೀಶ್ ಹೇಳಿಕೆಯನ್ನು ಪರಿಗಣಿಸಿ ವಿಚಾರಣಾ ನ್ಯಾಯಾಲಯ ಶಿಕ್ಷೆಗೆ ಗುರಿಪಡಿಸಲಾಗಿದೆ. ಆದರೆ, ಆರೋಪಿಯ ವಿರುದ್ಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸದಿದ್ದರೂ ಮತ್ತೊಬ್ಬ ಆರೋಪಿಯ ಹೇಳಿಕೆಯನ್ನು ಮಾತ್ರ ಪರಿಗಣಿಸಿ ಶಿಕ್ಷೆ ನೀಡುವುದಕ್ಕೆ ಸಾಧ್ಯವಾಗುವುದಿಲ್ಲ ಎಂದು ಪೀಠ ಹೇಳಿದೆ.
ಹರೀಶ್ಗೆ ನೀಡಿರುವ ನೀಡಿರುವ ಜಾಮೀನು ರದ್ದಾಗಲಿದ್ದು, ಮುಂದಿನ ಎರಡು ವಾರಗಳಲ್ಲಿ ಶಿಕ್ಷೆ ಅನುಭವಿಸುವುದಕ್ಕಾಗಿ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ: ಹಳೇಬೀಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಡಿ.ಆರ್. ಕುಮಾರ್ ಎಂಬುವರು ನಾಪತ್ತೆ ಆದ ಬಗ್ಗೆ ಪ್ರಕರಣ ದಾಖಲಿಸಿರುತ್ತಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ ಪೊಲೀಸರಿಗೆ ಕುಮಾರ್ ಪತ್ನಿ ರಾಧಾ ಎಂಬುವರೊಂದಿಗೆ ಆರೋಪಿ ಹರೀಶ್ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ಇದಕ್ಕೆ ಅಡ್ಡಿಯಾಗುತ್ತಿದ್ದ ಕಾರಣ ಹರೀಶ್, 2012ರ ಫೆಬ್ರವರಿ 16ರಂದು ಹಾಸನ ಜಿಲ್ಲೆಯ ಗ್ರಾಮವೊಂದರಲ್ಲಿ ಗದ್ದೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕುಮಾರ್ಗೆ ರಾಡ್ನಿಂದ ತಲೆ ಮತ್ತು ಎದೆ ಭಾಗಗಳಿಗೆ ಹೊಡೆದು ಕೊಲೆ ಮಾಡಿದ್ದ.
ಇದಾದ ಬಳಿಕ ಹರೀಶ್ ತನ್ನ ಸಹೋದರ ಲೋಕೇಶ್ ನೆರವಿನೊಂದಿಗೆ ಮೃತದೇಹವನ್ನು ಸರಕು ಸಾಗಣೆ ಆಟೋ ರಿಕ್ಷಾದಲ್ಲಿ ತೆಗೆದುಕೊಂಡು ಬಂದು ಖಾಲಿ ಜಮೀನೊಂದರಲ್ಲಿ ಮಣ್ಣುಮಾಡಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಹರೀಶ್, ರಾಧಾ ಮತ್ತು ಲೋಕೇಶ್ಗೆ 2017ರಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿತ್ತು. ಹರೀಶ್ಗೆ ಕೊಲೆ ಆಪರಾಧಕ್ಕೆ ಜೀವವಿರುವವರೆಗೂ ಶಿಕ್ಷೆ ಮತ್ತು 50 ಸಾವಿರ ರೂ.ಗಳ ದಂಡ ವಿಧಿಸಿತ್ತು.
ಅಲ್ಲದೆ, ಅಪರಾಧಿಕ ಒಳಸಂಚು ಮತ್ತು ಸಾಕ್ಷ ನಾಶ ಆರೋಪದಲ್ಲಿ 3 ಲಕ್ಷ ರೂ.ಗಳ ದಂಡ ವಿಧಿಸಲಾಗಿತ್ತು. ದಂಡದ ಮೊತ್ತವನ್ನು ಮೃತ ಡಿ.ಆರ್. ಕುಮಾರ್ ಮಕ್ಕಳಿಗೆ ನೀಡಬೇಕು ಎಂದು ಆದೇಶಿಸಲಾಗಿತ್ತು. ಅಲ್ಲದೆ, ಇದಕ್ಕೆ ಸಹಕರಿಸಿದ್ದ ಲೋಕೇಶ್ಗೆ ಸಾಕ್ಷ್ಯ ನಾಶದ ಆರೋಪದಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಿಸಲಾಗಿತ್ತು. ಇದನ್ನು ಪ್ರಶ್ನಿಸಿ ಹರೀಶ್ ಮತ್ತು ಲೋಕೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು.
ಇದನ್ನೂ ಓದಿ: ಬೈಕ್ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಗೆ 1.58 ಕೋಟಿ ಪರಿಹಾರ..ಇದು ಕೇರಳದಲ್ಲಿ ಬೈಕ್ ಅಪಘಾತಕ್ಕೆ ನೀಡಲಾದ ಅತ್ಯಧಿಕ ಮೊತ್ತ!