ಶಿವಮೊಗ್ಗ: ಹಳೇ ವೈಷ್ಯಮದ ಹಿನ್ನೆಲೆ ರಸ್ತೆಯಲ್ಲಿ ನಡೆದು ಹೋಗುತ್ತಿದ್ದವನ ಮೇಲೆ ಮಚ್ಚು ಬೀಸಿದ ಮೂವರು ಆರೋಪಿಗಳಿಗೆ ಶಿವಮೊಗ್ಗ ನ್ಯಾಯಾಲಯ ಏಳು ವರ್ಷಗಳ ಕಾಲ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ. 2016ರಲ್ಲಿ ಹರೀಶ ಎಂಬಾತನ ಮೇಲೆ ಮಂಜು, ಅನಿಲ್ ಹಾಗೂ ಪ್ರಶಾಂತ ಎಂಬುವವರು ಮಚ್ಚು ಬೀಸಿದ್ದರು. ಪರಿಣಾಮ ಹರೀಶ್ ಗಂಭೀರವಾಗಿ ಗಾಯಗೊಂಡಿದ್ದರು. ನಂತರ ಸ್ಥಳೀಯರು ಹರೀಶ್ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಈ ಕುರಿತು ದೊಡ್ಡಪೇಟೆ ಪೊಲೀಸ್ ಠಾಣೆಯ ಅಂದಿನ ಪಿಎಸ್ಐ ಹಾಲಿ ಕುಂಸಿ ಪಿಐ ಆದ ಅಭಯ್ ಸೋಮನಾಳ್ ಪ್ರಕರಣ ದಾಖಲಿಸಿಕೊಂಡು ಒಂದು ವರ್ಷದೊಳಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು.
ಪ್ರಕರಣವನ್ನು ವಿಚಾರಣೆ ನಡೆಸಿದ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮನು ಕೆ.ಎಸ್ ಅವರು ಆರೋಪಿಗಳಾದ ಮಂಜುನಾಥ್ ಅಲಿಯಾಸ್ ಕಟಿಂಗ್ ಶಾಪ್ ಮಂಜ(30), ಅನಿಲ್(30) ಹಾಗೂ ಪ್ರಶಾಂತ ಅಲಿಯಾಸ್ ಕೊಡ್ಲಿ ಪ್ರಶಾಂತ(30) ಇವರ ವಿರುದ್ಧ 307 ಐಪಿಸಿ ಅಡಿಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಮೂವರಿಗೂ 7 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು 40 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಗಾಂಜಾ ಪ್ರಕರಣದ ವಿಚಾರಣಾಧೀನ ಕೈದಿ ಆಸ್ಪತ್ರೆಯಿಂದ ಪರಾರಿ!
ದಂಡ ಕಟ್ಟಲು ವಿಫಲವಾದರೆ 4 ತಿಂಗಳ ಕಾಲ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಿದೆ. ಕಲಂ 324 ಐಪಿಸಿ ಅಡಿಯಲ್ಲಿ ಆರೋಪ ದೃಢಪಟ್ಟ ಹಿನ್ನೆಲೆ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಲಾಗಿದೆ. ದಂಡ ಕಟ್ಟಲು ವಿಫಲವಾದರೆ 1 ತಿಂಗಳ ಸಾದಾ ಕಾರಾಗೃಹ ಶಿಕ್ಷೆ ಅನುಭವಿಸಬೇಕಿದೆ. ಸರ್ಕಾರದ ಪರವಾಗಿ ವಕೀಲೆ ರತ್ನಮ್ಮ ಅವರು ವಾದ ಮಂಡಿಸಿದ್ದರು.