ಶಿವಮೊಗ್ಗ: ರಾಜ್ಯದ ಬಹು ಜನರ ಬೇಡಿಕೆಯಾಗಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆಯ 2011ರ ಕಾಲಂ 2(ಡಿ) ತಿದ್ದುಪಡಿ ತಂದಿರುವುದು ಬಹಳ ಸಂತಸವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.
ಜಿಲ್ಲೆಯ ತೀರ್ಥಹಳ್ಳಿ ಪಟ್ಟಣದ ಮಯೂರ ಹೋಟೆಲ್ ಸಭಾಂಗಣದಲ್ಲಿ ಇಂದು ಪತ್ರಿಕಾಗೋಷ್ಠಿ ನೆಡೆಸಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದ ಪರಿಷತ್ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. 192ಎ ಕಾಲಂ ಸ್ಥಗಿತಗೊಳಿಸಿರುವಂಥದ್ದು ಬಹಳ ಖುಷಿಯ ವಿಚಾರ ಎಂದರು.
ಒಂದು ಗುಂಟೆ ಸೈಟು ಮಾಡಿಕೊಡವರನ್ನು ಕೇಸ್ ಹಾಕುವ ಮೂಲಕ ಅವರನ್ನು ಬೆಂಗಳೂರಿಗೆ ಅಲೆಸುವಂತಹ ಕೆಲಸ ಮಾಡುತ್ತಿದ್ದರು. ಕುಮಾರಸ್ವಾಮಿ ಸರ್ಕಾರ ಇರುವಾಗ ಬೆಂಗಳೂರಿನಲ್ಲೇ ಇಲ್ಲಿಯ ಜನರಿಗೆ ಗಂಜಿ ಕೇಂದ್ರ ಮಾಡಲು ಹೇಳಿದ್ದೆ. ಅಂತಹ ಪರಿಸ್ಥಿತಿ ಇತ್ತು. ಇದು ಒಂದು ರೀತಿ ಬಡವರಿಗೆ ಯಮಪಾಷವಾಗಿತ್ತು. ಈಗ ಇದನ್ನು ರದ್ದುಗೊಳಿಸಿರುವುದರಿಂದ ಸಾವಿರಾರು ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ ಎಂದರು.
ಬಿಪಿಎಲ್ ಕಾರ್ಡ್ ಹಂಚಿಕೆ ಬಗ್ಗೆ ಪ್ರತಿಕ್ರಿಯಿಸಿ ನಾಲ್ಕು ಚಕ್ರದ ವಾಹನವಿದೆ ಎಂಬ ಕಾರಣಕ್ಕೆ ಬಿಪಿಎಲ್ ಕಾರ್ಡ್ ರದ್ದುಗೊಳಿಸುತ್ತಿದ್ದರು. ಈಗ ಯಾವುದೇ ಸಣ್ಣ ಪುಟ್ಟ ಕೆಲಸಕ್ಕೆ ಹೋಗುವವರು ಕೂಡ ಸೆಕೆಂಡ್ ಹ್ಯಾಂಡ್ ಕಾರನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಅಂತಹ ನಿಯಮವನ್ನೂ ರದ್ದುಗೊಳಿಸಲಾಗಿದೆ ಎಂದರು.
ಅಡಿಕೆಯ ಸಮಸ್ಯೆ ಬಗ್ಗೆ ಇತ್ತೀಚಿಗೆ ದೆಹಲಿಗೆ ಭೇಟಿ ನೀಡಿ ಆರ್ಥಿಕ ಸಚಿವರಾದ ನಿರ್ಮಲಾ ಸೀತಾರಾಮನ್ ಭೇಟಿಯಾಗಿ ವಿಶೇಷ ಪ್ರಸ್ತಾಪ ಮಾಡಲಾಗಿದೆ. ಅಡಿಕೆ ದರ ಅಯೋಮಯವಾಗುತ್ತದೆ ಎಂದು ಅರಿತುಕೊಂಡು ಬೇರೆ ಕಡೆಗಳಿಂದ ಬರುವಂತಹ ಅಡಿಕೆಯನ್ನು ಕಡ್ಡಾಯವಾಗಿ ಚೆಕ್ ಮಾಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ತಿಳಿಸಿದ್ದೇವೆ. ಅದಕ್ಕೆ ಕೇಂದ್ರ ಸರ್ಕಾರ ಕೂಡ ಸಮ್ಮತಿ ಸೂಚಿಸಿದೆ. ಇದರಿಂದ ರೈತರು ನೆಮ್ಮದಿಯಾಗಿ ಇರುವಂತೆ ಮಾಡಿದೆ ಎಂದರು.
ಇದನ್ನೂ ಓದಿ: ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಹೈಕಮಾಂಡ್ ಜೊತೆ ಚರ್ಚೆ: ಬಿಎಸ್ವೈ