ಶಿವಮೊಗ್ಗ: ಗೃಹ ಸಚಿವ ಆರಗ ಜ್ಞಾನೇಂದ್ರ ರಾಜೀನಾಮೆಗೆ ಆಗ್ರಹಿಸಿ ನಾಳೆ ಶಿವಮೊಗ್ಗದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಹಮ್ಮಿಕೊಂಡಿದೆ. ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಸಹ ಸಂಯೋಜಕ ಸತೀಶ್ ದಾವಣಗೆರೆ ತಿಳಿಸಿದರು.
ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪರಪ್ಪನ ಆಗ್ರಹಾರದಲ್ಲಿ ಹರ್ಷನ ಕೊಲೆ ಮಾಡಿದವರು ಮೊಬೈಲ್ ಬಳಸಿಕೊಂಡು ರಾಜ್ಯಾತಿಥ್ಯದಲ್ಲಿದ್ದಾರೆ. ಅವರು ಜೈಲಿನಿಂದಲೇ ತಮ್ಮ ಕುಟುಂಬದವರೂಂದಿಗೆ ಮಾತನಾಡಿಕೊಂಡು ಸಂತೋಷವಾಗಿದ್ದಾರೆ. ಜೈಲಿನೊಳಗೆ ಈ ರೀತಿಯಾಗಿ ಇರುವವರು ಇನ್ನೂ ಹೊರಗೆ ಬಂದರೆ ಹೇಗೆ ಇರ್ತಾರೆ ಎಂಬ ಪ್ರಶ್ನೆ ಕಾಡಲು ಪ್ರಾರಂಭಿಸಿದೆ ಎಂದರು.
ಹರ್ಷನ ಕೊಲೆ ಸೇರಿದಂತೆ ತೀರ್ಥಹಳ್ಳಿಯಲ್ಲಿ ಅಶಿಕ್ ಗೌಡ ಹಲ್ಲೆ ಹಾಗೂ ಉತ್ತರ ಕರ್ನಾಟಕದಲ್ಲಿ ಹಿಂದೂಗಳ ಮೇಲೆ ಗೂಂಡಾಗಿರಿ ನಡೆಯುತ್ತಿದೆ. ಇದೆಲ್ಲವನ್ನು ಖಂಡಿಸಿ ಪ್ರತಿಭಟನೆ ಆಯೋಜಿಸಲಾಗಿದೆ. ಹಿಂದೂಗಳಿಗೆ ರಕ್ಷಣೆ ನೀಡದ ಆರಗ ಜ್ಞಾನೇಂದ್ರ ತಮ್ಮ ಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸತೀಶ್ ದಾವಣಗೆರೆ ಆಗ್ರಹಿಸಿದರು.
ಇದನ್ನೂ ಓದಿ: ಹರ್ಷ ಹತ್ಯೆ ಆರೋಪಿಗಳಿಂದ ಜೈಲಿನಿಂದಲೇ ವಿಡಿಯೋ ಕರೆ: ಎಫ್ಐಆರ್ ದಾಖಲು
ಇದೇ ವೇಳೆ ಮಾತನಾಡಿದ ಕೊಲೆಯಾದ ಹರ್ಷನ ಅಕ್ಕ ಅಶ್ವಿನಿ, ನಮ್ಮ ತಮ್ಮನ ಕೊಲೆಗಾರರಿಗೆ ಶಿಕ್ಷೆ ಆಗಬೇಕು. ಆಗಲೇ ನಮಗೆ ನೆಮ್ಮದಿ. ಆದರೆ, ಸರ್ಕಾರವೇ ನಮ್ಮನ್ನು ನಿರ್ಲಕ್ಷಿಸಿದರೆ ಹೇಗೆ ಎಂದು ಪ್ರಶ್ನೆ ಮಾಡಿದರು. ಅಲ್ಲದೇ, ಓರ್ವ ಹೆಣ್ಣು ಮಗಳ ಜೊತೆ ಹೇಗೆ ಮಾತನಾಡಬೇಕೆಂಬ ಪರಿಜ್ಞಾನ ಸಹ ಗೃಹ ಸಚಿವರಿಗೆ ಇರಬೇಕು ಎಂದು ಬೇಸರ ಹೊರ ಹಾಕಿದರು.
ಇದನ್ನೂ ಓದಿ: ಲೋಪ ಸರಿಪಡಿಸದಿದ್ದರೆ ನಾಳೆಯಿಂದ ಮದ್ಯ ಮಾರಾಟ ಬಂದ್: ಸರ್ಕಾರಕ್ಕೆ ಮಾರಾಟಗಾರರ ಎಚ್ಚರಿಕೆ