ಶಿವಮೊಗ್ಗ: ಅಕ್ಟೋಬರ್ 2 ರಂದು ಪ್ರಧಾನಿ ನರೇಂದ್ರ ಮೋದಿ ಗಾಂಧಿ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಅಕ್ಟೋಬರ್ 3 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಾದಯಾತ್ರೆಯನ್ನು ಶಿಕಾರಿಪುರ ತಾಲೂಕು ಈಸೂರು ಗ್ರಾಮದಿಂದ ಪ್ರಾರಂಭಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಗಾಂಧೀಜಿ ತತ್ವಾದರ್ಶಗಳನ್ನು ಅನುಸರಿಬೇಕು ಹಾಗೂ ಗಾಂಧೀಜಿ ಅವರ 150 ನೇ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಬೇಕೆಂಬ ಹಾಗೂ ದೇಶದಲ್ಲಿ ಬಿಜೆಪಿ ಗಾಂಧಿ ಸಂಕಲ್ಪ ಯಾತ್ರೆಯನ್ನಾಗಿ ಮಾಡುವ ಉದ್ದೇಶದಿಂದ ಬಿಜೆಪಿ ಸಂಸದರ ಜೊತೆ ಜನಪ್ರತಿನಿಧಿಗಳು ಸೇರಿ ತಮ್ಮ ತಮ್ಮ ಲೋಕಸಭಾ ಕ್ಷೇತ್ರಗಳಲ್ಲಿ 150 ಕಿ.ಮೀ. ಪಾದಯಾತ್ರೆ ನಡೆಸಲಿದ್ದಾರೆ ಎಂದರು.
ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅವರು ಪಾದಯಾತ್ರೆಗೆ ಚಾಲನೆ ನೀಡಲಿದ್ದು, ಅಂದು ಪ್ರಥಮ ಹಂತದ ಪಾದಯಾತ್ರೆ ಪ್ರಾರಂಭವಾಗುತ್ತದೆ. ಪ್ರತಿ ದಿನ 10 ರಿಂದ 15 ಕಿ.ಮೀ ದೂರ ಪಾದಯಾತ್ರೆ ನಡೆಸಲಾಗುತ್ತದೆ. ಈ ವೇಳೆ ದಾರಿಯಲ್ಲಿ ಸಿಗುವ ಗ್ರಾಮಗಳಲ್ಲಿ ಸ್ವಚ್ಛತೆ, ಗ್ರಾಮ ನೈರ್ಮಲ್ಯ ಸೇರಿದಂತೆ ಸ್ವದೇಶಿ, ಸ್ವರಾಜ್, ಸ್ವಾವಲಂಬನೆ ಹಾಗೂ ಖಾದಿಯನ್ನು ಮೈಗೂಡಿಸಿಕೊಂಡು ಪಾದಯಾತ್ರೆ ನಡೆಸಲಾಗುವುದು. ಗ್ರಾಮಗಳಲ್ಲಿ ಸಭೆ ನಡೆಸಿ ಪಾದಯಾತ್ರೆ ಮುಂದುವರೆಸಲಾಗುವುದು ಎಂದು ಸಂಸದ ರಾಘವೇಂದ್ರ ಮಾಹಿತಿ ನೀಡಿದರು.
ಎರಡನೇ ಹಂತದ ಪಾದಯಾತ್ರೆಯ ಬಗ್ಗೆ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಿದ್ದು, ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳಲ್ಲೂ ಸಹ ಪಾದಯಾತ್ರೆ ನಡೆಸಲಾಗುವುದು. ಸಂಸದರು, ಶಾಸಕರು, ಎಂಎಲ್ಸಿಗಳು, ಸ್ಥಳೀಯ ಜನಪ್ರತಿನಿಧಿಗಳು ಸೇರಿ ಬಿಜೆಪಿಯ ಎಲ್ಲಾ ಕಾರ್ಯಕರ್ತರು ಭಾಗಿಯಾಗಲಿದ್ದಾರೆ. ಗಾಂಧೀಜಿಯವರ ತತ್ವಾದರ್ಶಗಳ ಕುರಿತು ಜನರಿಗೆ ಅರಿವು ಮೂಡಿಸುವ ಹಾಗೂ ಯುವ ಜನತೆಗೆ ಗಾಂಧೀಜಿ ಅವರ ಬಗ್ಗೆ ತಿಳಿಸುವ ಸಲುವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ತಿಳಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡರು, ಜಿಲ್ಲಾ ಬಿಜೆಪಿ ಪ್ರಭಾರಿ ಗಿರೀಶ್ ಪಟೇಲ್, ಎಸ್. ದತ್ತಾತ್ರಿ ಸೇರಿದಂತೆ ಇತರರು ಹಾಜರಿದ್ದರು.