ಶಿವಮೊಗ್ಗ/ಬೆಂಗಳೂರು: ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಬೆಂಗಳೂರು, ಶಿವಮೊಗ್ಗ ಸೇರಿದಂತೆ ರಾಜ್ಯಾದ್ಯಂತ ಪೊಲೀಸ್ ಇಲಾಖೆ ಹೈ ಅಲರ್ಟ್ ಘೋಷಿಸಿದೆ.
ಸೂಕ್ಷ್ಮ, ಅತಿಸೂಕ್ಷ್ಮ ಸ್ಥಳಗಳಲ್ಲಿ ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ 6 - ಕೆಎಸ್ಆರ್ಪಿ ತುಕಡಿ, 18 - ಡಿ.ಎ.ಆರ್. ತುಕಡಿಗಳು ಹಾಗೂ 1 ಡಿ-ಸ್ಪಾಟ್ ತುಕಡಿಯನ್ನು ಬಂದೋಬಸ್ತ್ಗಾಗಿ ನಿಯೋಜನೆ ಮಾಡಲಾಗಿದೆ. ಸಾಮಾಜಿಕ ಜಾಲತಾಣಗಳ ಮೇಲೂ ತೀವ್ರ ನಿಗಾ ಇಡಲಾಗಿದೆ. ಜಿಲ್ಲೆಯ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕುವೆಂಪು ವಿವಿ ಪರೀಕ್ಷೆ ಮುಂದೂಡಿಕೆ:
ಕುವೆಂಪು ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡುವ ಎಲ್ಲಾ ಪದವಿ ಪರೀಕ್ಷೆಗಳನ್ನು (ಬಿ.ಎಡ್ ಸೇರಿದಂತೆ) ಮುಂದೂಡಲಾಗಿದೆ ಎಂದು ಕುವೆಂಪು ವಿವಿಯ ಪರೀಕ್ಷಾಂಗ ಕುಲಪತಿ ಪ್ರೊ. ಎಂ.ವೆಂಕಟೇಶ್ವರಲು ತಿಳಿಸಿದ್ದಾರೆ. ಪರೀಕ್ಷೆಯ ಮುಂದಿನ ದಿನಾಂಕವನ್ನು ನಂತರ ತಿಳಿಸಲಾಗುವುದು ಎಂದು ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ವಿವಿಯ ಎಲ್ಲಾ ಪರೀಕ್ಷೆಗಳ ಮುಂದೂಡಿಕೆ:
ಬೆಂಗಳೂರು ವಿವಿಯ ಎಲ್ಲಾ ಪರೀಕ್ಷೆಗಳನ್ನೂ ಮುಂದೂಡಿಕೆ ಮಾಡಲಾಗಿದೆ. ಬೆಂಗಳೂರು ವಿವಿ ದೂರ ಶಿಕ್ಷಣ ವಿಭಾಗದ ಪರೀಕ್ಷೆಗಳು, ಯುಜಿ ಮತ್ತು ಪಿಜಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಗಿದೆ. ಸರ್ಕಾರ ಎಲ್ಲಾ ಶಾಲಾ -ಕಾಲೇಜುಗಳಿಗೆ ರಜೆ ಘೋಷಿಸಿದ್ದು, ಮುಂದಿನ ಪರೀಕ್ಷಾ ದಿನಾಂಕವನ್ನ ತಿಳಿಸಲಾಗುವುದು ಅಂತ ಬೆಂಗಳೂರು ವಿವಿ ಪರೀಕ್ಷಾ ಕುಲಸಚಿವ ಪ್ರೊ. ಸಿ.ಶಿವರಾಜು ಮಾಹಿತಿ ನೀಡಿದ್ದಾರೆ..