ಶಿವಮೊಗ್ಗ: ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯ ಅಬ್ಬರ ಮುಂದುವರೆದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಹಳ್ಳ-ಕೊಳ್ಳಗಳು, ಕೆರೆ -ಕಟ್ಟೆಗಳಿಗೆ ಹೆಚ್ಚಿನ ನೀರು ಬಂದಿದೆ. ಕೃಷಿ ಚಟುವಟಿಕೆಗಳು ಕೂಡ ಚುರುಕಾಗಿದ್ದು, ಭತ್ತದ ಸಸಿ ಮಡಿಗಳನ್ನು ಮಾಡಲು ರೈತರು ಗದ್ದೆಗಳಲ್ಲಿ ಸಿದ್ಧತೆ ಮಾಡಿಕೊಳ್ಳತೊಡಗಿದ್ದಾರೆ.
ಮಳೆ ಪ್ರಮಾಣ ಮತ್ತು ಜಲಾಶಯ ಮಟ್ಟ
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 245.40 ಮಿಮಿ ಮಳೆಯಾಗಿದ್ದು, ಸರಾಸರಿ 35.06 ಮಿಮಿ ಮಳೆ ದಾಖಲಾಗಿದೆ. ಜುಲೈ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 764.90 ಮಿಮಿ ಇದ್ದು, ಇದುವರೆಗೆ ಸರಾಸರಿ 360.75 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 18. 20 ಮಿಮಿ, ಭದ್ರಾವತಿ 10. 80 ಮಿಮಿ. ತೀರ್ಥಹಳ್ಳಿ 55. 70 ಮಿಮಿ, ಸಾಗರ 63. 10 ಮಿಮಿ, ಶಿಕಾರಿಪುರ 16.80 ಮಿಮಿ, ಸೊರಬ 26.80 ಮಿಮಿ. ಹಾಗೂ ಹೊಸನಗರ 54.00 ಮಿಮಿ ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಗಳಲ್ಲಿ
ಲಿಂಗನಮಕ್ಕಿ | ಭದ್ರಾ | ತುಂಗಾ | ಮಾಣಿ | ಚಕ್ರ | |
ಗರಿಷ್ಠ | 1819 | 186 | 588.24 | 595 | 580.57 |
ಇಂದಿನ ಮಟ್ಟ | 1782.5 | 177.7 | 586.81 | 579.28 | 575.20 |
ಒಳಹರಿವು | 53412.00 | 40920.00 | 49104.00 | 9341 | 2145.00 |
ಹೊರಹರಿವು | 0.0 | 156.00 | 51053.00 | 0.00 | 1233.00 |
ಶಿವಮೊಗ್ಗ: ಜಲಾಶಯ ಮಟ್ಟ ಹೆಚ್ಚಳ - ನದಿ ಪಾತ್ರದ ಜನರಿಗೆ ಎಚ್ಚರಿಕೆ: ಸತತ ಮಳೆಯಿಂದಾಗಿ ಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು, ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ನದಿಗೆ ಬಿಡುವ ಸಾಧ್ಯತೆ ಇರುವುದರಿಂದ ಜನ, ಜಾನುವಾರು ನದಿಪಾತ್ರದಲ್ಲಿ ತಿರುಗಾಡುವುದನ್ನು ನಿಷೇಧಿಸಲಾಗಿದೆ.
ಜು.12 ರಂದು ಜಲಾಶಯದ ನೀರಿನ ಮಟ್ಟ 178’ 10” ಅಡಿಗಿಂತ ಹೆಚ್ಚಾಗಿರುತ್ತದೆ. ಪ್ರಸ್ತುತ ಹರಿದು ಬರುತ್ತಿರುವ ಒಳಹರಿವಿನ ಪ್ರಮಾಣ 30,200 ಕ್ಯೂಸೆಕ್ಸ್ ಆಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದ್ದು, ಇದೇ ರೀತಿ ಮುಂದುವರೆದಲ್ಲಿ ಭದ್ರಾ ಜಲಾಶಯವು ಗರಿಷ್ಟ ನೀರಿನ ಮಟ್ಟ 186 ಅಡಿಗಳಿಗೆ ಅತೀ ಶೀಘ್ರವಾಗಿ ಭರ್ತಿಯಾಗುವ ಸಂಭವವಿರುತ್ತದೆ.
ಅಣೆಕಟ್ಟು ಸುರಕ್ಷತೆಯ ಹಿತದೃಷ್ಟಿಯಿಂದ ಹಾಗೂ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಮುಂಜಾಗೃತಾ ಕ್ರಮವಾಗಿ ಹೆಚ್ಚುವರಿ ನೀರನ್ನು ಯಾವ ಸಮಯದಲ್ಲಾದರೂ ಒಳಹರಿವಿನ ಪ್ರಮಾಣಕ್ಕೆ ಅನುಗುಣವಾಗಿ ಕ್ರೆಸ್ಟ್ ಗೇಟ್ ಮುಖಾಂತರ ನದಿಗೆ ಬಿಡಲಾಗುವುದು. ಆದ್ದರಿಂದ ಭದ್ರಾ ನದಿಯ ಎಡ ಮತ್ತು ಬಲದಂಡೆಯ ಉದ್ದಕ್ಕೂ ತಗ್ಗು ಪ್ರದೇಶದಲ್ಲಿ ವಾಸಿಸುವ ಜನರು ಮುಂಜಾಗ್ರತೆಯಾಗಿ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು.
ನದಿಪಾತ್ರದಲ್ಲಿ ಸಾರ್ವಜನಿಕರು ತಿರುಗಾಡುವುದು, ಜಾನುವಾರುಗಳನ್ನು ನದಿಪಾತ್ರದಲ್ಲಿ ಮೇಯಿಸುವುದನ್ನು ನಿಷೇಧಿಸಲಾಗಿದೆ ಎಂದು ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಅಧೀಕ್ಷಕ ಅಭಿಯಂತರರಾದ ಜಿ. ಎಸ್ ಪಟೇಲ್ ತಿಳಿಸಿದ್ದಾರೆ.
ಓದಿ: ಕೊಡಗು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಹಾನಿ: ಸಿಎಂ ಭೇಟಿ