ಶಿವಮೊಗ್ಗ: ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಅನೇಕ ಕಡೆಗಳಲ್ಲಿ ಭಾರಿ ಹಾನಿ ಸಂಭವಿಸಿದ್ದು, ಜನರಲ್ಲಿ ಆತಂಕ ಮನೆಮಾಡಿದೆ. 2019ರಿಂದ ಗುಡ್ಡ ಕುಸಿತದ ಭೀತಿ ಜನರನ್ನು ಕಾಡುತ್ತಿದೆ.
ಮೂರು ವರ್ಷಗಳ ಹಿಂದೆ ತೀರ್ಥಹಳ್ಳಿಯ ಹೆಗಲತ್ತಿ ಗ್ರಾಮದಲ್ಲಿ ಕಿಲೋಮೀಟರ್‌ಗಟ್ಟಲೇ ಗುಡ್ಡ ಜರಿದಿತ್ತು. ಅದೃಷ್ಟವಶಾತ್ ಅಂದು ಯಾವುದೇ ಪ್ರಾಣ ಹಾನಿ ಸಂಭವಿಸಿರಲಿಲ್ಲ. ನಂತರದ ದಿನಗಳಲ್ಲೂ ಗುಡ್ಡ ಕುಸಿತ ಪ್ರಕರಣಗಳು ಸಾಗರದ ಶರಾವತಿ ಕಣಿವೆ ಪ್ರದೇಶದಲ್ಲಿ ವರದಿಯಾಗಿವೆ. ಈ ವರ್ಷವೂ ಕೂಡ ಗುಡ್ಡ ಕುಸಿದಿದೆ.
ಸಾಗರದ ಅಡಗಳಲೆ ಗ್ರಾಮದ ಸುಧಾ, ಸಂತೋಷ್, ಜಿನದತ್ತ, ಮಂಜಮ್ಮ ಎಂಬುವವರ ಹತ್ತಾರು ಎಕರೆ ತೋಟ ಜಲಾವೃತವಾಗಿದೆ. ಇಲ್ಲಿನ ಇಡೀ ಗುಡ್ಡ ಹಾಗೂ ಕೃಷಿ ಭೂಮಿ ಸ್ವರೂಪವನ್ನೇ ಕಳೆದುಕೊಂಡು ಹಳ್ಳವಾಗಿ ಪರಿಣಮಿಸಿದೆ. ಕಳೆದ ಎರಡು ದಿನಗಳಿಂದ ಈ ಭಾಗದ ಜನರು ನರಕಯಾತನೆ ಅನುಭವಿಸುತ್ತಿದ್ದರೂ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಸುಳಿದಿಲ್ಲವಂತೆ. ಈ ಕುರಿತು ಗ್ರಾಮ ಪಂಚಾಯತ್ ಸದಸ್ಯ ವಿಜಯ್ ಮಾತನಾಡಿ, ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಚಿಕ್ಕಮಗಳೂರು: ಕೊಚ್ಚಿ ಹೋಗುವ ಸ್ಥಿತಿಯಲ್ಲಿ ಕಾಲು ಸಂಕ
ಸುಧಾಮಣಿ ಎಂಬುವವರು ಏಕಾಂಗಿ ಮಹಿಳೆ. ಒಂದು ಲಕ್ಷ ರೂಪಾಯಿ ಖರ್ಚು ಮಾಡಿ ತೋಟಕ್ಕೆ ಮಣ್ಣು, ಬೆಳೆ ಹಾಕಿಸಿದ್ದರು. ಹಳ್ಳದ ಸಮೀಪವೇ ಇರುವ ಜಮೀನುಗಳಿಗೆ ಕಳೆದ 20 ವರ್ಷದಿಂದಲೂ ಒಂದಿಲ್ಲೊಂದು ಸಮಸ್ಯೆ ಕಾಡುತ್ತಿದೆ. ಅಂದಿನಿಂದಲೂ ಸರ್ಕಾರವನ್ನು ಎಚ್ಚರಿಸುತ್ತಲೇ ಬಂದಿದ್ದೇವೆ. ಆದರೆ ಭೂ ಕುಸಿತಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಆಗಲಿಲ್ಲ. ಅಧಿಕಾರಿಗಳು ಅಗತ್ಯ ಸಹಾಯ ನೀಡಿಲ್ಲ. ಕಳೆದ ಎರಡು ದಿನಗಳಿಂದ ಕೆಲವೇ ಕೆಲವರು ಬಂದು ನೋಡಿಕೊಂಡು ಹೋಗಿದ್ದಾರೆ. ಆದರೆ ಏನೂ ಪ್ರಯೋಜನವಿಲ್ಲ. ಈ ಗುಡ್ಡದ ಮೇಲೆ ಅನೇಕ ಮನೆಗಳಿದ್ದು ಅವುಗಳೂ ಸಹ ಅಪಾಯಕಾರಿ ಸ್ಥಿತಿಯಲ್ಲಿವೆ. ಬಹಳ ಮುಖ್ಯವಾಗಿ ನಾಟಿ ಮಾಡಲು ಅಣಿಮಾಡಿದ್ದ ಗದ್ದೆಯೂ ಕೂಡ ಕೊಚ್ಚಿ ಹೋಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕೂಡಲೇ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.