ಶಿವಮೊಗ್ಗ : ಮಲೆನಾಡಿನಾದ್ಯಂತ ಮುಂಗಾರು ಬಿರುಸುಗೊಂಡಿದೆ. ಜಿಲ್ಲೆಯ ಅಪ್ಪಟ ಮಲೆನಾಡು ಸಾಗರ, ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಧಾರಾಕಾರ ಮಳೆಯಾಗಿದ್ರೆ ಇನ್ನುಳಿದ ತಾಲೂಕುಗಳಲ್ಲಿ ಸಾಧಾರಣ ಮಳೆ ಬಿಟ್ಟೂ ಬಿಡದಂತೆ ಸುರಿಯುತ್ತಿದೆ.
ಧಾರಾಕಾರ ಮಳೆ ಸುರಿಯುತ್ತಿರುವುದರಿಂದಾಗಿ ಜಿಲ್ಲೆಯಲ್ಲಿ ಹರಿಯುವ ನದಿಗಳ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗಿದೆ. ಹೊಸನಗರ, ಸಾಗರ ಹಾಗೂ ತೀರ್ಥಹಳ್ಳಿ ತಾಲೂಕಿನಲ್ಲಿ ಹೆಚ್ಚು ಮಳೆ ಸುರಿಯುತ್ತಿದೆ. ಮಂಗಳವಾರದಿಂದ ಇಂದು ಬೆಳಗಿನವರೆಗೆ ಹೊಸನಗರ ತಾಲೂಕಿನ ಖೈರಗುಂದ, ಅಮೃತ, ಸಾಗರ ತಾಲೂಕಿನ ಶಂಕರಣ್ಣ ಶಾನುಭಾಗ್, ತೀರ್ಥಹಳ್ಳಿ ತಾಲೂಕಿನ ಸಾಲೂರು ಗ್ರಾಮಗಳ ವ್ಯಾಪ್ತಿಯಲ್ಲಿ ಒಂದೇ ದಿನ 12 ಸೆಂಟಿಮೀಟರ್ಗಿಂತಲೂ ಹೆಚ್ಚು ಮಳೆಯಾಗಿದೆ.
ಜಲಾಶಯಗಳಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣವೂ ಗಣನೀಯವಾಗಿ ಹೆಚ್ಚಾಗಿದೆ. ರಾಜ್ಯದ ಅತಿ ದೊಡ್ಡ ಜಲಾಶಯ ಎಂಬ ಕೀರ್ತಿಗೆ ಪಾತ್ರವಾದ ಲಿಂಗನಮಕ್ಕಿ ಜಲಾಶಯಕ್ಕೆ ಬರೋಬ್ಬರಿ 31.460 ಸಾವಿರ ಕ್ಯೂಸೆಕ್ಗೂ ಹೆಚ್ಚು ನೀರು ಹರಿದು ಬರುತ್ತಿದೆ. ತುಂಗಾ ಜಲಾಶಯಕ್ಕೆ 23.560 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಈ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿರುವ ಹಿನ್ನೆಲೆ ಅಷ್ಟೂ ನೀರನ್ನು ತುಂಗಾ ನದಿಗೆ ಬಿಡಲಾಗುತ್ತಿದೆ.
ಭದ್ರಾ ಜಲಾಶಯಕ್ಕೆ 12.759 ಸಾವಿರ ಕ್ಯೂಸೆಕ್ನಷ್ಟು ನೀರು ಹರಿದು ಬರುತ್ತಿದೆ. ಮಲೆನಾಡಿನಲ್ಲಿ ಮುಂಗಾರು ತಡವಾಗಿ ಆರಂಭಗೊಂಡಿದ್ದು, ಮಾತ್ರವಲ್ಲದೇ ಆರಂಭದಲ್ಲಿ ಬಿರುಸಾಗಿ ಮಳೆಯೂ ಆಗಿರಲಿಲ್ಲ. ಇದೀಗ ಮುಂಗಾರು ಬಿರುಸುಗೊಂಡಿದೆ.