ಶಿವಮೊಗ್ಗ : ಫೆಬ್ರವರಿ 20ರಂದು ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾಗಿತ್ತು. ಈ ಪ್ರಕರಣದ ತನಿಖೆಯನ್ನ ಎನ್ಐಎ ತಂಡಕ್ಕೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ಇಂದು ಎನ್ಐಎ ತಂಡ ನಗರಕ್ಕೆ ಆಗಮಿಸಿದೆ. ಎನ್ಐಎ ತಂಡ ಹರ್ಷ ಕೊಲೆ ಪ್ರಕರಣದ ಎಲ್ಲಾ ಮಾಹಿತಿಯನ್ನು ಶಿವಮೊಗ್ಗದ ಪೊಲೀಸರಿಂದ ಪಡೆದುಕೊಳ್ಳುತ್ತಿದೆ. ಹರ್ಷ ಕೊಲೆ ಪ್ರಕರಣದ ತನಿಖೆ ನಡೆಸಿದ ಶಿವಮೊಗ್ಗದ ಸಿಇಎನ್ ಪೊಲೀಸರಿಂದ ಎಲ್ಲಾ ಮಾಹಿತಿಯ ಜೊತೆಗೆ ದಾಖಲೆಗಳನ್ನು ಸಂಗ್ರಹಿಸುತ್ತಿದೆ.
ಎನ್ಐಎ ತಂಡ ಶಿವಮೊಗ್ಗ ಭೇಟಿಯ ಕುರಿತು ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಹರ್ಷ ಕೊಲೆ ಪ್ರಕರಣವನ್ನು ನಮ್ಮ ರಾಜ್ಯದ ಪೊಲೀಸರು ತನಿಖೆ ನಡೆಸಿದ್ದರು. ಆದರೆ, ಈ ಪ್ರಖರಣದ ತನಿಖೆಯನ್ನ ಎನ್ಐಎಗೆ ವಹಿಸುವುದು ಸೂಕ್ತ ಎಂದೆನ್ನಿಸಿತ್ತು. ಹರ್ಷನ ಕೊಲೆಗಾರರ ಹಿನ್ನೆಲೆ, ಅವರ ಹಿಂದಿರುವ ಸಂಘಟನೆಗಳು ಎಲ್ಲವನ್ನು ನೋಡಿದಾಗ ಎನ್ಐಎಗೆ ಕೊಡಬೇಕು ಎನ್ನಿಸಿ ತನಿಖೆಗೆ ನೀಡಲಾಗಿದೆ.
ಈಗ ಎನ್ಐಎ ತಂಡ ತನಿಖೆ ಪ್ರಾರಂಭ ಮಾಡಿದೆ. ಕೊಲೆಯ ಹಿಂದೆ ಕೋಮುಗಲಭೆ ಮಾಡುವ ಉದ್ದೇಶವಿತ್ತೆ ಎಂಬುದು ಮೇಲ್ನೋಟಕ್ಕೆ ತನಿಖೆಯ ಮೂಲಕ ತಿಳಿಯುತ್ತದೆ. ಆದರೆ, ಉಳಿದ ವಿಚಾರಗಳ ಕುರಿತು ನಾನು ಗೃಹ ಸಚಿವನಾಗಿ ಹೇಳಲು ಆಗುವುದಿಲ್ಲ ಎಂದರು.
ಎನ್‌ಐಎ ತಂಡ ಭೇಟಿ ನೀಡಿರುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಮಾತನಾಡಿ, ಇಂದು ಎನ್ಐಎ ತಂಡ ಶಿವಮೊಗ್ಗಕ್ಕೆ ಭೇಟಿ ನೀಡಿದೆ. ಅವರು ನಮ್ಮ ಪೊಲೀಸರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರಾಥಮಿಕವಾಗಿ ನಮ್ಮ ಪೊಲೀಸರು ಮಾಡಿದ ತನಿಖೆಯ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದಾರೆ. ನಮ್ಮ ಪೊಲೀಸರು ಅವರಿಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.