ಶಿವಮೊಗ್ಗ:ಸುಡಾನ್ನ ಆಂತರಿಕ ಯುದ್ದದಿಂದ ಕಂಗಾಲಾಗಿದ್ದ ಕನ್ನಡಿಗರನ್ನು ಆಪರೇಷನ್ ಕಾವೇರಿ ಮೂಲಕ ಸರ್ಕಾರ ಸುರಕ್ಷಿತವಾಗಿ ದೇಶಕ್ಕೆ ಕರೆತಂದಿದೆ. ಇನ್ನು ಶಿವಮೊಗ್ಗದ ಸಾಗರ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ನಗರದದ 5 ಜನ ಹಾಗೂ ಸದಾಶಿವಪುರ( ಹಕ್ಕಿಪಿಕ್ಕಿ ಕ್ಯಾಂಪ್, ಚಿಕ್ಕಮಟ್ಟಿ) ನ ಸುಮಾರು 40 ಜನರ ತಂಡ ಇಂದು ಸುರಕ್ಷಿತವಾಗಿ ತಮ್ಮ ತಾಯ್ನಾಡಿಗೆ ವಾಪಸ್ ಆಗಿದೆ.
ಶಿವಮೊಗ್ಗದ ಡಾ.ಬಿ.ಆರ್.ಅಂಬೇಡ್ಕರ್ ನಗರದ ನಿವಾಸಿಗಳಾದ ದೀಪಾ, ಗೋಪಾಲ್, ಲಾಕುಲಾ ಸೇರಿದಂತೆ ಒಟ್ಟು ಐದು ಜನ ವಾಪಸ್ ಆಗಿದ್ದಾರೆ. ಇವರು ಬೆಳಗ್ಗೆ 5 ಗಂಟೆಗೆ ಬಸ್ನಲ್ಲಿ ತಮ್ಮ ಮನೆ ತಲುಪಿದ್ದಾರೆ. ಇವರೆಲ್ಲ ತಮ್ಮ ಆರ್ಯುವೇದ ಔಷಧಗಳನ್ನು ಮಾರಾಟ ಮಾಡಲು ಸುಡಾನ್ ದೇಶಕ್ಕೆ ಕಳೆದ ವರ್ಷ ಹೋಗಿದ್ದರು. ಇವರು ಪ್ರತಿ ವರ್ಷ ಹೀಗೆ ಆಫ್ರಿಕಾ ದೇಶಗಳಿಗೆ ಪ್ರಯಾಣ ಮಾಡುತ್ತಾರೆ. ಇವರು ಭಾರತದಲ್ಲಿ ಸಿಗುವ ನಾರು - ಬೇರುಗಳಿಂದ ತಲೆಗೆ ಹಾಗೂ ದೇಹದ ಮಸಾಜ್ಗೆ ಬಳಸುವ ಎಣ್ಣೆ ತಯಾರು ಮಾಡಿಕೊಂಡು ಹೋಗುತ್ತಾರೆ. ಮೊದಲು ದೊಡ್ಡ ಸಿಟಿಯಲ್ಲಿ ಮನೆ ಮಾಡಿಕೊಂಡು, ನಂತರ ಸಿಟಿ ಅಕ್ಕಪಕ್ಕದ ಪಟ್ಟಣ ಸೇರಿದಂತೆ ಗ್ರಾಮಗಳಿಗೆ ತೆರಳಿ ವ್ಯಾಪಾರ ಮಾಡಿಕೊಂಡು ನಂತರ ದೇಶಕ್ಕೆ ವಾಪಸ್ ಆಗುತ್ತಿದ್ದರು.
ಆದರೆ ಸುಡಾನ್ನ ಸೇನೆ ಹಾಗೂ ಅರೆ ಸೇನೆ ಪಡೆಗಳು ಆಡಳಿತವನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಆಂತರಿಕ ಯುದ್ದ ನಡೆಸುತ್ತಿರುವುದರಿಂದ ಅಲ್ಲಿದ್ದ ಭಾರತೀಯರು ಸೇರಿದಂತೆ ಪ್ರಪಂಚದ ಇತರ ದೇಶಗಳ ಪ್ರಜೆಗಳು ಸಂಕಷ್ಟಕ್ಕೆ ಸಿಲುಕಿದ್ದರು. ಇದರ ಪರಿಣಾಮ ಜನರು ಹೊರಗೆ ಕಾಲಿಡದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬೆಳವಣಿಗೆಯಿಂದ ಕಂಗಾಲಾಗಿದ್ದ ಭಾರತೀಯರು ಹಾಗೂ ಕನ್ನಡಿಗರು ತಮ್ಮನ್ನು ದೇಶಕ್ಕೆ ಕರೆಸಿಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದ್ದರು.
ಸುಡಾನ್‌ನಿಂದ ಹಿಂತಿರುಗಿದ ದೀಪ ಮಾತನಾಡಿ, ಯುದ್ದ ಪ್ರಾರಂಭವಾದಗಿನಿಂದ ನಾವು ಒಂದು ಕಡೆ ಸಿಲುಕಿಕೊಂಡಿದ್ದೆವು. ಅಲ್ಲಿಂದ ಬೇರೆ ಕಡೆ ಹೋಗಲು ಆಗದೆ ಅಲ್ಲೆ ಇರಲು ಆಗದೆ ಒಂದು ತಿಂಗಳಿನಿಂದ ಸಂಕಷ್ಟಕ್ಕೆ ಸಿಲುಕಿದ್ದೇವು. ನಮಗೆ ಊಟ, ತಿಂಡಿ ಕುಡಿಯುವ ನೀರಿನ ವ್ಯವಸ್ಥೆ ಇರಲಿಲ್ಲ. ಕೊನೆಗೆ ಶೌಚಾಲಯಕ್ಕೆ ಬಳಸುವ ನೀರು ಕುಡಿದು ಜೀವ ಉಳಿಸಿಕೊಂಡಿದ್ದೆವು. ನಮ್ಮ ಕಷ್ಟ ಅರಿತ ಭಾರತ ಸರ್ಕಾರ ನಮ್ಮನ್ನು ಸುಡಾನ್ ನಿಂದ ಸೌದಿ ಕರೆದುಕೊಂಡು ಬಂದು. ಅಲ್ಲಿಂದ ನೇರವಾಗಿ ಬೆಂಗಳೂರಿಗೆ ಕರೆತಂದರು. ಮತ್ತೆ ಅಲ್ಲಿಂದ ನಮಗೆ ಬಸ್ ವ್ಯವಸ್ಥೆಯನ್ನು ಮಾಡಿ ನಮ್ಮ ಮನೆಗೆ ತಲುಪಿಸಿದ್ದಾರೆ. ನಮಗೆ ಎಲ್ಲ ವ್ಯವಸ್ಥೆಯನ್ನು ಮಾಡಿ ನಮಗೆ ಸ್ಪಂದಿಸಿದ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಎಂದರು.
ಇನ್ನೂ 600 ಜನ ನಮ್ಮವರು ಸುಡಾನ್ನ ಗಿನೈನಾ, ಜಾಲಿಂಗ್ ಹಾಗೂ ಅಲ್ಪಶೇರ್ಗಳಲ್ಲಿ ಸಿಲುಕಿಕೊಂಡಿದ್ದಾರೆ. ಅವರನ್ನು ಅದಷ್ಟು ಬೇಗ ಭಾರತಕ್ಕೆ ಕರೆತರಬೇಕು ಎಂದು ರಾಜ್ಯ ಸರ್ಕಾಕ್ಕೆ ಮನವಿ ಮಾಡಿದರು.
ಇದನ್ನೂ ಓದಿ: ಸುಡಾನ್‌ನಿಂದ 246 ಭಾರತೀಯರನ್ನು ಕರೆತಂದ ಎರಡನೇ ವಿಮಾನ..