ಶಿವಮೊಗ್ಗ: ಲಾಕ್ಡೌನ್ ಅವಧಿಯಲ್ಲಿನ ಅತಿಥಿ ಉಪನ್ಯಾಸಕರ ಸಂಕಷ್ಟ ಅರಿತ ರಾಜ್ಯ ಸರ್ಕಾರ, ಅವರಿಗೆ ಗೌರವಧನ (ವೇತನ) ಬಿಡುಗಡೆ ಮಾಡಿದೆ ಎಂದು ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಸೋಮಶೇಖರ್ ಶಿವಮೊಗ್ಗಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾವು (ಅಥಿತಿ ಉಪನ್ಯಾಸಕರು) ಕಳೆದ 13 ವಾರಗಳಿಂದ ಲಾಕ್ಡೌನ್ ವೇಳೆಯ ವೇತನ ಹಾಗೂ ಸೇವಾ ಭದ್ರತೆಯ ಕುರಿತು ಪ್ರತಿಭಟನೆ ನಡೆಸಿಕೊಂಡು ಬಂದಿದ್ದೆವು, ಕಳೆದ ಅಧಿವೇಶನಲ್ಲಿ ನಮ್ಮ ಪರವಾಗಿ ಧ್ವನಿ ಎತ್ತಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರಿಗೆ ಹಾಗೂ ಹಣ ಬಿಡುಗಡೆ ಮಾಡಿದ ಸಿಎಂ ಯಡಿಯೂರಪ್ಪ ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಸೇವಾ ಭದ್ರತೆಯ ಮೇಲೆ ನಡೆಯದ ಚರ್ಚೆ:
ನಮ್ಮ ಲಾಕ್ಡೌನ್ ವೇಳೆಯ ಗೌರವಧನವನ್ನು ಬಿಡುಗಡೆ ಮಾಡುವಂತೆ ಆಗ್ರಹಿಸಲಾಗಿತ್ತು. ಸೇವಾ ಭದ್ರತೆ ಬಗ್ಗೆ ಮನವಿ ಸಹ ಮಾಡಲಾಗಿತ್ತು. ಸದ್ಯ ಸರ್ಕಾರ ಲಾಕ್ಡೌನ್ ವೇಳೆಯ ವೇತನವನ್ನು ಮಾತ್ರ ಬಿಡುಗಡೆ ಮಾಡಿದೆ, ಇದನ್ನು ನಾವು ಸ್ವಾಗತಿಸುತ್ತೇವೆ. ಇದರ ಜೊತೆಗೆ ನಾವು ನಮ್ಮ ಸೇವಾ ಭದ್ರತೆಯ ಬಗ್ಗೆಯೂ ಸಹ ಹೋರಾಟ ನಡೆಸಿದ್ದೆವು. ಮುಂದಿನ ಅಧಿವೇಶನದಲ್ಲಿ ನಮ್ಮ ಸೇವಾ ಭದ್ರತೆಯ ಬಗ್ಗೆ ಚರ್ಚೆ ನಡೆಸಿ, ನ್ಯಾಯ ಒದಗಿಸಿಕೊಡಬೇಕು ಎಂದು ಇದೇ ವೇಳೆ ಸೋಮಶೇಖರ್ ಮನವಿ ಮಾಡಿದ್ದಾರೆ.