ಶಿವಮೊಗ್ಗ: ಪ್ರಪಂಚದಾದ್ಯಂತ ಕೊರೊನಾ ಮಹಾಮಾರಿಯಂತೆ ಕಾಡುತ್ತಿದೆ. ಈ ಸಂದರ್ಭದಲ್ಲಿ ನಿಜಾಮುದ್ದಿನ್ ನಲ್ಲಿ ಧಾರ್ಮಿಕ ಸಭೆ ನಡೆಸುವ ಅವಶ್ಯಕತೆ ಇತ್ತಾ?, ದೆಹಲಿಗೆ ಹೋದವರು ಸುಸೈಡ್ ಬಾಂಬರ್ಸ್ ಗಳಾ?, ತಾವು ಸತ್ತು, ಬೇರೆಯವರನ್ನು ಸಾಯಿಸುವ ಯೋಚನೆ ಮಾಡಿದ್ರಾ ಗೊತ್ತಿಲ್ಲ. ಆದರೂ ಸಹ ದೆಹಲಿಗೆ ಹೋಗಿ ಬಂದವರನ್ನು ಬದುಕಿಸುವ ಯತ್ನವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಾಡುತ್ತಿವೆ ಎಂದು ಗ್ರಾಮೀಣಾಭಿವೃದ್ದಿ ಖಾತೆ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಜಾಮುದ್ದಿನ್ ಗೆ ಎಷ್ಟು ಜನ ಹೋಗಿದ್ದರು. ಯಾಕೆ ಹೋಗಿದ್ದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಈ ಸಂದರ್ಭದಲ್ಲಿ ಈ ವಿಚಾರವನ್ನು ದೊಡ್ಡದಾಗಿ ಮಾಡುವ ಅವಶ್ಯಕತೆ ಇಲ್ಲ. ಇದು ಧರ್ಮ ಹಾಗೂ ರಾಜಕಾರಣ ಮಾಡುವ ಸಂದರ್ಭವಲ್ಲ. ಇಡೀ ದೇಶವೆ ಕೊರೊನಾ ಓಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಸರ್ಕಾರಿ ಸೇವೆಯಲ್ಲಿರುವವರು, ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸುವುದು ಸರಿಯಲ್ಲ. ಎಲ್ಲಾರು ಒಟ್ಟಾಗಿ ಹೋಗಬೇಕು ಎಂದರು.
ಶಿವಮೊಗ್ಗ ಜಿಲ್ಲೆಯಿಂದ ದೆಹಲಿಗೆ 24 ಮಂದಿ ತೆರಳಿದ್ದರು. ಇದರಲ್ಲಿ ದಾವಣಗೆರೆ, ಚಿತ್ರದುರ್ಗ ಹಾಗೂ ಬಳ್ಳಾರಿಯವರು ಇದ್ದಾರೆ. ನಮ್ಮ ಜಿಲ್ಲೆಯವರು 21 ಜನ ಇದ್ದಾರೆ. ಈಗಾಗಲೇ 10 ಜನರನ್ನು ಪರೀಕ್ಷೆ ಮಾಡಲಾಗಿದ್ದು ,ಎಲ್ಲರಲ್ಲೂ ಸಹ ಕೊರೊನಾ ನೆಗಟಿವ್ ಬಂದಿದೆ. ಉಳಿದ 11 ಜನ ಮೊದಲೆ ಹೋಂ ಕ್ವಾರಂಟೈನ್ ಆಗಿದ್ದರು. ಇದರಿಂದ ಜಿಲ್ಲೆಯಲ್ಲಿ ಯಾವುದೆ ಕೊರೊನಾ ಪಾಸಿಟಿವ್ ಪತ್ತೆಯಾಗಿಲ್ಲ ಎಂದು ಈಶ್ವರಪ್ಪ ತಿಳಿಸಿದರು. ಈ ವೇಳೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್, ಜಿ.ಪಂ ಸಿಇಓ ವೈಶಾಲಿ ಸೇರಿ ಇತರರು ಹಾಜರಿದ್ದರು.