ಶಿವಮೊಗ್ಗ: ಸುಳ್ಳಿನ ನೋಬೆಲ್ ಪ್ರಶಸ್ತಿ ನೀಡುವುದಾದರೆ ಅದನ್ನು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಕೊಡಬಹುದು ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರು ಸಿದ್ದರಾಮಯ್ಯನವರ ವಿರುದ್ಧ ಕಿಡಿಕಾರಿದ್ದಾರೆ.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ ಆತ್ಮಹತ್ಯೆ ಪ್ರಕರಣದಲ್ಲಿ ಕ್ಲೀನ್ ಚಿಟ್ ಸಿಕ್ಕ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯನವರು ಸಿಎಂ ಆಗಿದ್ದವರು, ಜೊತೆಗೆ ವಕೀಲರು ಸಹ ಆಗಿದ್ದವರು. ಇಂತಹವರು ನನ್ನ ರಿಪೋರ್ಟ್ ತೆಗೆದುಕೊಂಡಿಲ್ಲ ಎಂದು ಹೇಳಿದ್ದಾರೆ. ಇಷ್ಟು ಸುಳ್ಳು ಹೇಳುವ ವ್ಯಕ್ತಿಯನ್ನು ನನ್ನ ಜೀವನದಲ್ಲೇ ನೋಡಿಲ್ಲ. ರಿಪೋರ್ಟ್ ಕೊಡದೆ ಬಿ ರಿಪೋರ್ಟ್ ಕೊಡ್ತಾರಾ. ಟೀಕೆ ಮಾಡುವುದಕ್ಕೂ ಒಂದು ಮಿತಿ ಇರಬೇಕು ಎಂದರು.
ಬಿಎಸ್ ವೈ ರಾಜಕೀಯ ನಿವೃತ್ತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪನವರು, ಯಡಿಯೂರಪ್ಪ ಏನೇ ನಿರ್ಧಾರ ಕೈಗೊಂಡರೂ ಪಕ್ಷದ ಹಿತದೃಷ್ಟಿ ಹಾಗೂ ರಾಜ್ಯದ ಹಿತದೃಷ್ಟಿಯಿಂದ ನಿರ್ಧಾರ ಕೈಗೊಳ್ಳುತ್ತಾರೆ. ಅವರು ಹಿರಿಯರು, ಅವರ ನಿರ್ಧಾರ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ಅವರ ನಿರ್ಧಾರದ ಕುರಿತು ಕೇಂದ್ರ ನಾಯಕರು ತೀರ್ಮಾನ ಮಾಡುತ್ತಾರೆ. ಯಡಿಯೂರಪ್ಪನವರ ನಿರ್ಧಾರವನ್ನು ಕೇಂದ್ರದ ನಾಯಕರು ಒಪ್ಪುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದರು.
ಜಾತಿ ರಾಜಕಾರಣ ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ : ಈಗ ಕಾಂಗ್ರೆಸ್ ನಲ್ಲಿ ನಾನು ಸಿಎಂ, ತಾನು ಸಿಎಂ ಎಂದು ಹೊಡೆದಾಡಿಕೊಳ್ಳುತ್ತಿದ್ದಾರೆ. ಅಧಿಕೃತವಾಗಿ ವಿಪಕ್ಷ ಇರುತ್ತದೆಯೇ ಇಲ್ಲವೊ ಎಂಬ ಅನುಮಾನ ಬಂದಿದೆ. ಸಿದ್ದರಾಮಯ್ಯ ಅವರಿಗೆ ಬೇರೆಯವರು ಸಿಎಂ ಆದರೆ, ಸಮಾಧಾನ ಇಲ್ಲ. ನಾನೇನು ಕಡಿಮೆ ಇಲ್ಲ ಎಂದು ಡಿ.ಕೆ. ಶಿವಕುಮಾರ್ ಹೇಳುತ್ತಿದ್ದು, ಈಗ ಒಕ್ಕಲಿಗರ ಸಿಎಂ ಆಗುತ್ತೇನೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಕುರುಬರ ನಾಯಕ ಎಂದು ಕಾಂಗ್ರೆಸ್ ಪಕ್ಷಕ್ಕೆ ಜಾತಿ ಲೇಪನ ಮಾಡುತ್ತಿದ್ದಾರೆ. ಜಾತಿಲೇಪನ ಹಚ್ಚಿರುವುದು ಪ್ರಜಾಪ್ರಭುತ್ವಕ್ಕೆ ಅವಮಾನ, ಜಾತಿಗೂ ಅವಮಾನ ಎಂದರು.
ಸಂಪುಟ ವಿಸ್ತರಣೆ : ಬಿಜೆಪಿಯಲ್ಲಿ ಒಂದು ವ್ಯವಸ್ಥೆ ಇದೆ. ಕೇಂದ್ರದ ನಾಯಕತ್ವ ಇದೆ. ವಿಸ್ತರಣೆ ಮಾಡಬೇಕಾ, ಬೇಡವಾ ಎಂಬ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದರು.
ಈ ವೇಳೆ ಮಹಾನಗರ ಪಾಲಿಕೆಯ ಪ್ರತಿಪಕ್ಷದ ನಾಯಕಿಯಾಗಿ ಅಧಿಕಾರ ಸ್ವೀಕರಿಸಿದ ಕಾಂಗ್ರೆಸ್ ಪಾಲಿಕೆ ಸದಸ್ಯೆಗೆ ಈಶ್ವರಪ್ಪ ಅವರು ಶುಭಕೋರಿದರು. ಅಲ್ಲದೆ ಮೇಯರ್ ಕಚೇರಿಗೆ ಬಂದ ನೂತನ ರಾಷ್ಟ್ರಪತಿ ದ್ರೌಪತಿ ಮುರ್ಮು ಅವರ ಭಾವಚಿತ್ರವನ್ನು ಮೇಯರ್ ಸುನೀತಾ ಅಣ್ಣಪ್ಪನವರಿಗೆ ಹಸ್ತಾಂತರ ಮಾಡಿದರು.
ಓದಿ : CET ಫಲಿತಾಂಶ ಘೋಷಣೆ ದಿನಾಂಕ ಪ್ರಕಟಿಸಿದ ಸಚಿವ ಅಶ್ವತ್ಥ ನಾರಾಯಣ