ಶಿವಮೊಗ್ಗ: ಮಹಾರಾಷ್ಟ್ರದಲ್ಲಿ ಹಿಂದುತ್ವದ ಬಗ್ಗೆ ಬಾಳಾ ಠಾಕ್ರೆ ಹುಲಿ ಇದ್ದಂತಿದ್ದರು, ಆದರೆ ಉದ್ಧವ್ ಠಾಕ್ರೆ ಇಲಿ ಇದ್ದಂಗಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದರು. ಮಹಾ ಸರ್ಕಾರ ಪತನವಾಗುತ್ತದೆ, ಇದರಲ್ಲಿ ಯಾವುದೇ ಅನುಮಾನವಿಲ್ಲ. ಕಾಂಗ್ರೆಸ್‌ಗೆ ಬೆಂಬಲ ಕೊಟ್ಟವರು, ಕಾಂಗ್ರೆಸ್ ಮುಟ್ಟಿದವರೆಲ್ಲಾ ನಾಶ ಆಗ್ತಿದ್ದಾರೆ ಎಂದರು.
ಮಹಾರಾಷ್ಟ್ರದಲ್ಲಿ ಸರಕಾರ ಬಿದ್ದು ಹೋಗ್ತದೆ. ಅವರಾಗಿಯೇ ಬಂದ್ರೆ ಸರಕಾರ ರಚನೆ ಮಾಡ್ತೀವಿ. ಈಗಿನ ಮಹಾ ಸರಕಾರದಲ್ಲಿ ಎಷ್ಟು ಪಕ್ಷ ಇದೆಯೋ ಗೊತ್ತಿಲ್ಲ. ಪರಸ್ಪರ ನಂಬಿಕೆ ಇಲ್ಲ ಎಂದು ತಿಳಿಸಿದರು.
ಕಾಂಗ್ರೆಸ್‌ನವರಿಗೆ ಟೀಕಿಸುವುದೇ ಕೆಲಸ: ಮೋದಿ ರಾಜ್ಯ ಪ್ರವಾಸದ ಕುರಿತು ಸಿದ್ದರಾಮಯ್ಯ ಟೀಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಅವತ್ತೇ ಹೇಳಿದ್ದೆ. ಸಿದ್ದರಾಮಯ್ಯನಿಗೆ ಹುಚ್ಚು ಹಿಡಿದಿದೆ. ಈ ಹುಚ್ಚು ಬಿಡಿಸಲು ಪ್ರಪಂಚದಲ್ಲೇ ಔಷಧಿ ಇಲ್ಲ. ಎಂತೆಂಥಾ ಸಂದರ್ಭದಲ್ಲಿ ಮೋದಿ ದೇಶಕ್ಕಾಗಿ ಸೇವೆ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ವಿಶ್ವವೇ ಮೆಚ್ಚುವಂತೆ ಕೆಲಸ ಮಾಡಿದ್ದಾರೆ. ದೇಶದ ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ವ್ಯಾಕ್ಸಿನ್ ನೀಡಿರುವುದು ಪ್ರಧಾನಿ ಮೋದಿ. ಇದನ್ನು ಬೇರೆ ದೇಶದವರೇ ಮೆಚ್ಚಿಕೊಂಡಿದ್ದಾರೆ. ಸಿದ್ದರಾಮಯ್ಯ ಟೀಕೆ ಮಾಡುವುದಕ್ಕೆ ಬೆಲೆ ಇಲ್ಲ. ಟೀಕೆ ಮಾಡುವುದೇ ಇವರ ಕೆಲಸ ಎಂದು ಹೇಳಿದರು.
ಇದನ್ನೂ ಓದಿ: ಪಂಚಮಸಾಲಿ 2ಎ ಮೀಸಲಾತಿ ವಿವಾದ: ಸಿಎಂ ಸಂಧಾನ ಸಫಲ, ಹೋರಾಟ ಕೈಬಿಡಲು ನಿರ್ಧಾರ