ಶಿವಮೊಗ್ಗ : ಅಂತರ್ಜಲ ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಲಶಕ್ತಿ (ಕ್ಯಾಚ್ ದಿ ರೈನ್ ) ಯೋಜನೆಯ ಅನುಷ್ಠಾನದಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿಯೇ ಪ್ರಥಮ ಸ್ಥಾನ ಪಡೆದುಕೊಂಡಿದೆ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಖಾತೆ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ನಗರದ ತಮ್ಮ ಕಚೇರಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ವರ್ಷದ ಮಾರ್ಚ್ನಲ್ಲಿ ಜಲಶಕ್ತಿ ಯೋಜನೆಗೆ ಚಾಲನೆ ನೀಡಿದ್ದರು. ಈ ಯೋಜನೆ ಜಾರಿಯಾದಾಗಿನಿಂದ ಈವರೆಗೆ ರಾಜ್ಯದಲ್ಲಿ 4, 87, 655 ಕಾಮಗಾರಿಗಳನ್ನು ನಡೆಸಲಾಗಿದೆ ಎಂದರು.
ಓದಿ : ರಾಜ್ಯಸಭೆ-ಲೋಕಸಭೆ ಹೈಜಾಕ್ ಮಾಡಿದವರು ಭಯೋತ್ಪಾದಕರಿಗೆ ಸಮ.. ಸಚಿವ ಕೆ ಎಸ್ ಈಶ್ವರಪ್ಪ
ಜಲಶಕ್ತಿ ಯೋಜನೆಯಡಿ ಕೆರೆ, ಕೃಷಿ ಹೊಂಡ, ಗೋ ಕಟ್ಟೆ, ಕಲ್ಯಾಣಿಗಳನ್ನು ಅಭಿವೃದ್ದಿ ಮಾಡಲಾಗಿದೆ. ಈ ಯೋಜನೆಯ ಜಾರಿಗೆ ಗ್ರಾಮೀಣ ಭಾಗದ ಜನ ಸೈನಿಕರಂತೆ ಕೆಲಸ ಮಾಡಿದ್ದಾರೆ. ಇದಕ್ಕೆ ಸಹಕರಿಸಿದ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು.
ಜಿಲ್ಲಾ ಪಂಚಾಯತ್ಗಳ ಅಧೀನದಲ್ಲಿದ್ದ 28 ಸಾವಿರ ಕೆರೆಗಳನ್ನು ಗ್ರಾಮ ಪಂಚಾಯತ್ಗಳಿಗೆ ವಹಿಸಲಾಗಿದೆ. ನಮ್ಮ ಅಧಿಕಾರ ಇರುವ 1 ವರ್ಷ 10 ತಿಂಗಳಲ್ಲಿ ಉಳಿದ ಎಲ್ಲಾ ಕೆರೆಗಳನ್ನು ಅಭಿವೃದ್ದಿಪಡಿಸಲಾಗುವುದು. ಈ ಕೆರೆಗಳನ್ನು ಗ್ರಾಮ ಪಂಚಾಯತ್ಗಳ ಪಿಡಿಒಗಳು ಸವಾಲಿನ ರೀತಿ ತೆಗೆದುಕೊಂಡು ಅಭಿವೃದ್ದಿ ಪಡಿಸುತ್ತಾರೆ ಎಂದು ಎಂದು ಭರವಸೆ ನೀಡಿದರು.