ಶಿವಮೊಗ್ಗ: ನನಗೂ ಯಡಿಯೂರಪ್ಪ ಕುಟುಂಬದ ನಡುವೆ ಅವಿನಾಭಾವ ಸಂಬಂಧವಿದೆ. 1973ರಿಂದ ಶಿಕಾರಿಪುರಕ್ಕೆ ಬರುತ್ತಿದ್ದೇನೆ. ಆಗ ಯಡಿಯೂರಪ್ಪ ಧರ್ಮಪತ್ನಿ ಇದ್ದರು, ಅವರ ಕೈಯಲ್ಲಿನ ಊಟ, ಚಹಾ ಕುಡಿಯುತ್ತಿದ್ದೆವು. ಇಲ್ಲಿನ ಆರ್ಎಸ್ಎಸ್ ಶಿಬಿರಕ್ಕೆ ನಾನು ಬಂದಿದ್ದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಶಿಕಾರಿಪುರ ಹಾಗೂ ಯಡಿಯೂರಪ್ಪ ಜೊತೆಗಿನ ನಂಟಿನ ಬಗ್ಗೆ ಮಾತನಾಡಿದ್ದಾರೆ.
ಶಿಕಾರಿಪುರದಲ್ಲಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ನಾನು 1983ರಲ್ಲಿ ಯಡಿಯೂರಪ್ಪ ಆದೇಶದಂತೆ ತೀರ್ಥಹಳ್ಳಿ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ಕೇವಲ 2 ಸಾವಿರ ಮತಗಳಿಂದ ಸೋತಿದ್ದೆ. ನಾನು ಸ್ಪರ್ಧೆ ಮಾಡಲ್ಲ ಅಂದರೂ, ಸೂಚನೆ ಆಗಿದೆ ಪಾಲನೆ ಮಾಡಬೇಕಷ್ಟೆ ಎಂದು ಯಡಿಯೂರಪ್ಪ ಸೂಚಿಸಿದ್ದರು. ಅಂದು ಗೆದ್ದಿದ್ದರೆ ಯಡಿಯೂರಪ್ಪ ಜೊತೆ ವಿಧಾನಸೌಧ ನೋಡುತ್ತಿದ್ದೆ ಎಂದು ನೆನಪಿಸಿಕೊಂಡರು.
ಆಗ ಚುನಾವಣೆಗೆ ನನ್ನ ಬಳಿ ಹಣ ಇರಲಿಲ್ಲ. ಹಾಗಾಗಿ ಇದ್ದ ಮೂರು ಕಾರಿಗೆ ಡೀಸೆಲ್ ಹಾಕಿಸಲು ಹಣವಿಲ್ಲದೇ, ಎರಡು ಕಾರನ್ನು ಹಾಗೆಯೇ ನಿಲ್ಲಿಸಿ ಒಂದೇ ಕಾರಿನಲ್ಲಿ ಓಡಾಡುತ್ತಿದ್ದೆ, ಆದರೆ, ಆ ಕಾರಿಗೆ ರಿವರ್ಸ್ ಗೇರ್ ಇರಲಿಲ್ಲ. ಬಳಿಕ ಮತ್ತೆರಡು ಚುನಾವಣೆಯಲ್ಲಿ ಸೋಲನುಭವಿಸಿದೆ.
ಆದರೆ, ತೀರ್ಥಹಳ್ಳಿ ಜನ 1994ರಲ್ಲಿ ನನ್ನನ್ನು ಗೆಲ್ಲಿಸಿ ವಿಧಾನಸೌಧಕ್ಕೆ ಕಳುಹಿಸಿದರು. 9 ಚುನಾವಣೆಯಲ್ಲಿ 5 ಸಲ ಸೋತು, 4ನೇ ಬಾರಿಗೆ ಗೆದ್ದಿದ್ದಕ್ಕೆ ಗೃಹ ಸಚಿವನಾಗಿದ್ದೇನೆ. ಸಿಎಂ ಬೊಮ್ಮಾಯಿ ಅವರ ಕೃಪೆ, ಯಡಿಯೂರಪ್ಪ ಹಾಗೂ ಆರ್ಎಸ್ಎಸ್ ನಾಯಕರ ಆಶೀರ್ವಾದದಿಂದ ಗೃಹ ಖಾತೆ ಸಿಕ್ಕಿದೆ.
ನಾನು ಬರುವ ದಾರಿಯಲ್ಲಿ ಜನ ನಿಂತು ಹಾರ ಹಾಕಿದ್ದು ರೋಮಾಂಚನವಾಗಿದೆ. ಗಂಡು ಮೆಟ್ಟಿನ ಕ್ಷೇತ್ರ, ಯಡಿಯೂರಪ್ಪ ಸ್ಫೂರ್ತಿಯಿಂದ ನನ್ನಂತಹ ನೂರಾರು ಜನ ಇದ್ದಾರೆ. ಈ ಸರ್ಕಾರದಲ್ಲಿ ರಾಜ್ಯದ ಜನರ ಸೇವೆ ಸಲ್ಲಿಸುವ ಅವಕಾಶ ದೊರಕಿದೆ ಎಂದು ಹೇಳಿದರು.
ನಂತರ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ನಮ್ಮ ತಂದೆಯವರ ಜೊತೆ ಹೋರಾಟ ನಡೆಸಿ, ಇಂದು ಗೃಹ ಸಚಿವರಾಗಿದ್ದಾರೆ. ಹಿಂದೆಲ್ಲಾ ಅವರು ಶಾಸಕರಾಗಿ ಬರುತ್ತಿದ್ದರು. ಈಗ ಗೃಹ ಸಚಿವರಾಗಿ ಆಗಮಿಸುತ್ತಿದ್ದಾರೆ. ಇದರಿಂದ ಇವರಿಗೆ ನಾಗರಿಕ ಸನ್ಮಾನ ಮಾಡಬೇಕೆಂದು ಯಡಿಯೂರಪ್ಪ ತಿಳಿಸಿದ ಕಾರಣ ನಾಗರಿಕ ಸನ್ಮಾನ ನಡೆದಿದೆ ಎಂದರು.
ಇದನ್ನೂ ಓದಿ: ಭಾರತೀಯರ ಸ್ಥಳಾಂತರಕ್ಕಾಗಿ ಹಿಂದೂ, ಸಿಖ್ ಸಮುದಾಯದವರ ಸಂಪರ್ಕದಲ್ಲಿದ್ದೇವೆ: ಅರಿಂದಮ್ ಬಾಗ್ಚಿ