ಶಿವಮೊಗ್ಗ : ಸಂಯುಕ್ತ ಕಿಸಾನ್ ಮೋರ್ಚಾದ ರಾಕೇಶ್ ಟಿಕಾಯತ್ ಮೇಲೆ ಬಿಜೆಪಿ ಸರ್ಕಾರ ದ್ವೇಷದಿಂದ ಎಫ್ಐಆರ್ ದಾಖಲಿಸಿದೆ ಎಂದು ಶಿವಮೊಗ್ಗ ಮಹಾ ಪಂಚಾಯತ್ನ ಸಂಚಾಲಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಹಾಪಂಚಾಯತ್ ಸಂಚಾಲಯಕರು ಮಾತನಾಡಿ, ನಾವು ಬೆಳೆ ಬೆಳೆಯುವವರ ಹಾಗೂ ಅನ್ನ ತಿನ್ನುವವರ ಮಹಾ ಪಂಚಾಯತ್ ನಡೆಸಿದ್ದೇವೆ.
ಆದರೆ, ಬಿಜೆಪಿ ಅನ್ನ ತಿನ್ನದ ಕಾರಣ ರಾಕೇಶ್ ಟಿಕಾಯತ್ ಮೇಲೆ ಎಫ್ಐಆರ್ ದಾಖಲಿಸಿದೆ ಎಂದು ರೈತ ಪಂಚಾಯತ್ನ ಸಂಚಾಲಕರಲ್ಲಿ ಒಬ್ಬರಾದ ವಕೀಲ ಕೆ ಪಿ ಶ್ರೀಪಾಲ್ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ಹಾಗೂ ಹಾವೇರಿಯಲ್ಲಿ ನಡೆದ ಮಹಾ ಪಂಚಾಯತ್ನಲ್ಲಿ ರಾಕೇಶ್ ಟಿಕಾಯತ್ ಅವರು ನಾವು ಈಗಾಗಲೇ ದೆಹಲಿಯಲ್ಲಿ ಹೋರಾಟ ಮಾಡುತ್ತಿದ್ದೇವೆ. ನೀವೆಲ್ಲ ದೆಹಲಿಗೆ ಬರಬೇಕೆಂದೇನೂ ಇಲ್ಲ. ನೀವು ಬೆಂಗಳೂರಿನಲ್ಲಿ ದೆಹಲಿ ಮಾದರಿಯ ರೀತಿ ಹೋರಾಟ ನಡೆಸಿ. ಮಾರುಕಟ್ಟೆಗಳನ್ನು ಅದಾನಿ, ಅಂಬಾನಿ ಅವರಿಗೆ ಮಾರುತ್ತಿದ್ದಾರೆ.
ನೀವು ವಿಧಾನಸೌಧವನ್ನೇ ಮಾರುಕಟ್ಟೆಯನ್ನಾಗಿಸಿಕೊಂಡು ವ್ಯಾಪಾರ ಮಾಡಿ ಎಂದು ಟಿಕಾಯತ್ ಸ್ಪಷ್ಟವಾಗಿ ಹೇಳಿದ್ದಾರೆ. ಇದು ಪ್ರಚೋದನಕಾರಿ ಎಂದು ಹೇಳಿರುವ ಗೃಹ ಸಚಿವರಷ್ಟು ಅವಿವೇಕಿ ಹಾಗೂ ಸಿಎಂರಂತಹ ಅವೈಜ್ಞಾನಿಕ ಜ್ಞಾನದ ಕೊರತೆಯ ಬಿಜೆಪಿ ಸರ್ಕಾರ ಎಲ್ಲೂ ಇಲ್ಲ.
ಬಿಜೆಪಿಯವರಿಗೆ ನಿಜವಾಗಿಯೂ ತಾಕತ್ ಇದ್ದರೆ, ಯಾರು ಲೋಕಾಯುಕ್ತ ನೋಟಿಸ್ ನೀಡಿದೆಯಲ್ಲ ಅವರನ್ನು ಮೊದಲು ಬಂಧಿಸಬೇಕು. ಯಾರು ನಾಡನ್ನು ಕೊಳ್ಳೆ ಹೊಡೆದಿದ್ದಾರೋ ಅವರನ್ನು ಸಿಎಂ ಹಾಗೂ ಉಸ್ತುವಾರಿ ಸಚಿವರು ಜೊತೆಯಲ್ಲಿಟ್ಟುಕೊಂಡು ಓಡಾಡುತ್ತಿದ್ದಾರೆ. ಒಬ್ಬ ರೈತ ನಾಯಕ ಬಂದ್ರೆ ಅವರ ವಿರುದ್ದ ಸುಳ್ಳು ಎಫ್ಐಆರ್ ದಾಖಲಿಸುತ್ತೀರಾ? ನಿಮಗೆ ನಾಚಿಗೆಯಾಗಬೇಕು.
ರಾಕೇಶ್ ಟಿಕಾಯತ್ ಕೇವಲ ಕಣ್ಣೀರು ಹಾಕಿದಕ್ಕೆ ದೇಶದ ರೈತರು ಒಗ್ಗಾಟ್ಟಾಗಿ ಹೋರಾಟ ಮಾಡುತ್ತಿದ್ದಾರೆ. ಕೊರೂನಾ ಕಾರಣ ನೀಡಿ ಕೇಸ್ ದಾಖಲಿಸಲಾಗದೆ ಈಗ ಪ್ರಚೋದನಕಾರಿ ಭಾಷಣ ಅಂತಾ ಸುಳ್ಳು ಕೇಸ್ ದಾಖಲಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯ ಎಸ್ಪಿ ಹಾಗೂ ಡಿಸಿ ಅವರು ಬಿಜೆಪಿಯವರ ಏಜೆಂಟ್ ರೀತಿ ವರ್ತಿಸುತ್ತಿದ್ದಾರೆ.
ಸಿಎಂ ಓರ್ವ ಮಗನನ್ನು ಡಿಸಿಯಾಗಿಸಲಿ ಹಾಗೂ ಇನ್ನೋರ್ವರನ್ನು ಎಸ್ಪಿಯಾನ್ನಗಿಸಲಿ. ಇನ್ನು, ಹುಣಸೋಡು ಪ್ರಕರಣದಲ್ಲಿ ಪ್ರಮುಖರನ್ನೇ ಬಿಟ್ಟು ಸ್ಪೋಟಕಗಳನ್ನು ನೀಡಿದ ಅನಂತಪುರಂದವರನ್ನು ಹಿಡಿದುಕೊಂಡು ವಿಚಾರಣೆ ಮಾಡಲಾಗುತ್ತಿದೆ ಎಂದು ದೂರಿದರು.
ಮಾರ್ಚ್ 26ಕ್ಕೆ ದೆಹಲಿ ಹೋರಾಟ ಪ್ರಾರಂಭವಾಗಿ ನಾಲ್ಕು ತಿಂಗಳು ಮುಗಿಯುತ್ತದೆ. ಈ ಹಿನ್ನೆಲೆ ಭಾರತ ಬಂದ್ಗೆ ಕರೆ ನೀಡಿದೆ. ಶಿವಮೊಗ್ಗದಲ್ಲಿ ಭಾರತ್ ಬಂದ್ ನಡೆಸದೆ ಕೇವಲ ಪ್ರತಿಭಟಿಸಲಾಗುತ್ತದೆ. ಏಪ್ರಿಲ್ 26 ರಂದು ಬೆಂಗಳೂರಿನಲ್ಲಿ ಮಹಾ ಪಂಚಾಯತ್ ನಡೆಸಲಾಗುವುದು. ಇದರ ಪೂರ್ವಭಾವಿ ಸಭೆಗೆ ಡಾ.ದರ್ಶನ್ ಪಾಲ್ ಆಗಮಿಸಲಿದ್ದಾರೆ.
ಶಿವಮೊಗ್ಗದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ರೈತ ವಿರೋಧಿ ಕಾಯ್ದೆಯ ಪ್ರತಿಗಳನ್ನು ಹರಿದು ಹಾಕಲಾಗುವುದು ಎಂದು ರೈತ ಮುಖಂಡ ಹೆಚ್ ಆರ್ ಬಸವರಾಜಪ್ಪ ತಿಳಿಸಿದ್ದಾರೆ.