ಶಿವಮೊಗ್ಗ: ಶಿವಮೊಗ್ಗದ ಹೊರ ವಲಯದ ಗುಡ್ಡೆಕಲ್ಲಿನಲ್ಲಿ ಶಿವಮೊಗ್ಗ ಹೊರ ವಲಯಕ್ಕೆ ನಿರಂತರ ಕುಡಿಯುವ ನೀರಿನ ಯೋಜನೆಗೆ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪನವರು, ನಗರದ ಹೊರವಲಯದ ಪ್ರದೇಶಗಳಿಗೆ ಕುಡಿಯುವ ನೀರು ಕಲ್ಪಿಸಲು 95 ಕೋಟಿ ರೂ. ವೆಚ್ಚದ ದೊಡ್ಡ ಮೊತ್ತದ ಕಾಮಗಾರಿಯನ್ನು ಶಿವಮೊಗ್ಗಕ್ಕೆ ನೀಡಿರುವ ಕ.ನ.ನೀ.ಸ ಮತ್ತು ಒ.ಚ.ಮಂಡಳಿ ಅಧ್ಯಕ್ಷರಾದ ರಾಜುಗೌಡರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬರುವ ಮಾರ್ಚ್ ಒಳಗೆ ನಗರದಲ್ಲಿ ಪ್ರಗತಿಯಲ್ಲಿರುವ 24x7 ಕುಡಿಯುವ ನೀರು ಸರಬರಾಜು ಯೋಜನೆ ಕೂಡ ಪೂರ್ಣಗೊಳ್ಳಲಿದೆ. ಇನ್ನು ಒಂದು ವರ್ಷದಲ್ಲಿ ಈ ಕಾಮಗಾರಿಯನ್ನೂ ಸಹ ಮುಗಿಸಬೇಕು. ಇದಕ್ಕಾಗಿ ಕಂಟ್ರಾಕ್ಟರ್ಗಳಿಗೆ ನಾವು ಎಲ್ಲ ರೀತಿಯ ಸಹಕಾರ ನೀಡುತ್ತೇವೆ. ಇನ್ನೊಂದು ವರ್ಷದಲ್ಲಿ ಎರಡೂ ಕಾಮಗಾರಿಗಳು ಪೂರ್ಣಗೊಂಡು ನಗರದ ಎಲ್ಲ ಮನೆಗಳಿಗೆ ಕುಡಿಯುವ ನೀರು ಲಭಿಸಲಿದೆ ಎಂದು ಹೇಳಿದರು.