ಶಿವಮೊಗ್ಗ: ಎಂಜಿನಿಯರ್ ಮತ್ತು ಗುತ್ತಿಗೆದಾರರ ಮೇಲೆ ಐಟಿ ದಾಳಿ ನಡೆದಾಗ ಕುಮಾರಸ್ವಾಮಿ ಪ್ರತಿಭಟನೆ ನಡೆಸಿದ್ದರು. ಸಂವಿಧಾನದತ್ತ ಸ್ಥಾನದಲ್ಲಿರುವ ಸಿಎಂ ಹೀಗೆ ಪ್ರತಿಭಟಿಸಿದ್ದು ನಮ್ಮ ರಾಜ್ಯದಲ್ಲಿ ಮಾತ್ರ ನಡೆದಿರಬಹುದು. ಸತ್ಯಹರಿಶ್ಚಂದ್ರ ಅಂತ ಇದ್ರೆ ಅದು ದೇವೇಗೌಡ ಅಂಡ್ ಫ್ಯಾಮಿಲಿ ಮಾತ್ರ ಇರಬೇಕು ಎಂದು ಪರಿಷತ್ ಸದಸ್ಯ ಆಯನೂರು ಮಂಜುನಾಥ್ ವ್ಯಂಗ್ಯವಾಡಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಐಟಿ ದಾಳಿಯಿಂದ ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರ ಅಂತ್ಯಗೊಳ್ಳಲಿದೆ ಎಂದೆನ್ನಿಸುತ್ತದೆ. ದೇಶದಲ್ಲಿ ಮೋದಿ ಮತ್ತೆ ಪ್ರದಾನಿಯಾಗುತ್ತಾರೆ. ಮೋದಿ ಕೈ ಬಲಪಡಿಸಲು ಶಿವಮೊಗ್ಗ ಮತ್ತು ದಾವಣಗೆರೆಯಿಂದ ಬಿಜೆಪಿ ಅಭ್ಯರ್ಥಿಗಳು ಸಂಸದರಾಗಿ ಆಯ್ಕೆಯಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಯ ನಂತರ ಯಡಿಯೂರಪ್ಪ ಮೂಲೆಗುಂಪಾಗುತ್ತಾರೆ ಎಂಬ ಡಿ.ಕೆ.ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮ ಪಕ್ಷದ ಮೇಲಿನ ಕಾಳಜಿಗೆ ಡಿ.ಕೆ.ಶಿವಕುಮಾರ್ ಅವರಿಗೆ ಧನ್ಯವಾದಗಳು. ದೇವೇಗೌಡರಿಗೆ 28, ಶಾಮನೂರಿಗೆ ಪಾಪ 18, ಹೀಗೆ ಅವರ ಪಕ್ಷದಲ್ಲಿ ಸಾಕಷ್ಟು ಜನ ಇದ್ದಾರೆ. ಆರೋಗ್ಯ ಸರಿ ಇಲ್ಲದ ಕುಮಾರಸ್ವಾಮಿ ಸಿಎಂ ಆಗಿದ್ದಾರೆ. ವಯಸ್ಸಾದ ದೇವೇಗೌಡರು ಚುನಾವಣೆಗೆ ಸ್ಪರ್ಧೆ ಮಾಡುತ್ತಿದ್ದಾರೆ. ದೊಡ್ಡಗೌಡರ ಕುಟುಂಬದ ರಾಜಕಾರಣದ ವಿರುದ್ಧ ಇದೇ ಡಿಕೆಶಿ ಹೋರಾಟ ನಡೆಸಿದ್ದರು. ದೇವೇಗೌಡರ ಕುಟುಂಬಕ್ಕೆ ಬೈಯ್ಯಲಾಗದೆ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಯಡಿಯೂರಪ್ಪನವರ ರೀತಿ ಪ್ರವಾಸ ಮಾಡಲು ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯನವರಿಗೂ ಸಾಧ್ಯವಿಲ್ಲ. ಯಡಿಯೂರಪ್ಪನವರಿಗೆ ಸರಿಗಟ್ಟುವಂತಹ ರಾಜಕಾರಣಿ ರಾಜ್ಯದಲ್ಲಿ ಇಲ್ಲ ಎಂದರು.
ಈ ವೇಳೆ ದಾವಣಗೆರೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾಧವ್, ಎಸ್.ರುದ್ರೇಗೌಡ ಸೇರಿ ಇತರರು ಹಾಜರಿದ್ದರು. ಈ ವೇಳೆ ಕಾಂಗ್ರೆಸ್ ತೂರೆದು ಹಲವಾರು ಜನ ಬಿಜೆಪಿ ಸೇರ್ಪಡೆಗೊಂಡರು.