ಶಿವಮೊಗ್ಗ: ವಿಳಾಸ ಕೇಳುವ ನೆಪದಲ್ಲಿ ಮಹಿಳೆಯರ ಸರ ಕದ್ದು ಪರಾರಿಯಾಗುತ್ತಿದ್ದ ಮಂಜುನಾಥ್ (34) ಎಂಬ ಸರಗಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಈತ ಜನದಟ್ಟಣೆ ಕಡಿಮೆ ಇರುವ ಬಡಾವಣೆಗಳಲ್ಲಿ ಓಡಾಡುವ ಮಹಿಳೆಯರನ್ನು ಟಾರ್ಗೆಟ್ ಮಾಡಿ, ಅವರ ಬಳಿ ಅಡ್ರೆಸ್ ಕೇಳುತ್ತಾ ಅವರ ಸರ ಕದ್ದು ಪರಾರಿಯಾಗುತ್ತಿದ್ದ. ಈ ಕುರಿತು ಶಿವಮೊಗ್ಗ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿತ್ತು.
ಕಳೆದ ವಾರ ನಗರದ ಪ್ರಿಯದರ್ಶಿನಿ ಬಡಾವಣೆಯಲ್ಲಿ ನಡೆದು ಹೋಗುತಿದ್ದ ಮಹಿಳೆಯ ಬಳಿ ಬಂದು, ವಿಳಾಸ ಕೇಳುವ ನೆಪದಲ್ಲಿ ಕಣ್ಣಿಗೆ ಖಾರದಪುಡಿ ಹಾಕಿ ಬಂಗಾರದ ಚೈನ್ ಹಾಗೂ ಅವಲಕ್ಕಿ ಸರ ಕಿತ್ತು ಪರಾರಿಯಾಗಿದ್ದ. ಈ ಕುರಿತು ಪ್ರಕರಣ ದಾಖಲಿಸಿ ಕೊಂಡಿದ್ದ ವಿನೋಬನಗರ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತ ಶಿವಮೊಗ್ಗ ತಾಲೂಕು ಕೋಟೆಗಂಗೂರು ಗ್ರಾಮದ ನಿವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ. ₹2.30 ಲಕ್ಷ ಮೌಲ್ಯದ 65 ಗ್ರಾಂ ತೂಕದ 2 ಚಿನ್ನದ ಸರ ಹಾಗೂ ಬಜಾಜ್ ಡಿಸ್ಕವರಿ ಬೈಕ್‌ನ ವಶಕ್ಕೆ ಪಡೆಯಲಾಗಿದೆ.