ಶಿವಮೊಗ್ಗ: ನಗರದಲ್ಲಿ ನಿರಂತರ ಶಾಂತಿಯನ್ನು ಕಾಪಾಡಲು ಜಿಲ್ಲಾಡಳಿತ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಮನವಿ ಮಾಡಿದರು.
ಇತ್ತೀಚಿಗೆ ನಗರದಲ್ಲಿ ನಡೆದ ಕೆಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿ, ಯಾವುದೇ ಸಮಸ್ಯೆಗಳು ಎದುರಾದರೂ ಅದನ್ನು ತಕ್ಷಣ ಬಗೆಹರಿಸಲು ಜಿಲ್ಲಾಡಳಿತ ಸದಾ ಸಿದ್ಧವಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆ ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತಿದ್ದು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು.
ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಬರುವುದು ಸಹಜ. ಅಂತಹ ಸಂದರ್ಭಗಳಲ್ಲಿ ಸಮುದಾಯದ ನಾಯಕರು ಯುವಕರಿಗೆ ಬುದ್ಧಿ ಹೇಳಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸಬೇಕು. ಅಹಿತರಕರ ಘಟನೆಗಳಿಂದ ಅಮಾಯಕರಿಗೆ ತೊಂದರೆಯಾಗುತ್ತಿದ್ದು, ವ್ಯಾಪಾರಿಗಳು ಸಂಕಷ್ಟ ಅನುಭವಿಸುವ ಪರಿಸ್ಥಿತಿ ಇದೆ. ಇದಕ್ಕೆ ಯಾರೂ ಅವಕಾಶ ಕಲ್ಪಿಸಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ: ಬಹುಮಹಡಿ ವಸತಿ ಯೋಜನೆಯಡಿ ಪಟ್ಟಿ ಸಲ್ಲಿಸಲು ಶಾಸಕರಿಗೆ ವಾರದ ಗಡುವು: ಸಚಿವ ಸೋಮಣ್ಣ