ಶಿವಮೊಗ್ಗ: ಕನ್ನಡ ಸಾಹಿತ್ಯ ಪರಿಷತ್ತಿಗೆ ಮತ್ತಷ್ಟು ಕಸುವು ನೀಡಲು ಮತ್ತೊಮ್ಮೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ, ಪುನರ್ ಆಯ್ಕೆ ಬಯಸಿದ್ದೇನೆ ಎಂದು ಮಾಜಿ ಕಸಾಪ ಅಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ಸ್ಥಾನದ ಆಕಾಂಕ್ಷಿ ಡಿ.ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಕಳೆದ 29 ವರ್ಷಗಳಿಂದ ಸದಸ್ಯ, ಕಾರ್ಯದರ್ಶಿ, ಅಧ್ಯಕ್ಷನಾಗಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕಟ್ಟಿ ಬೆಳೆಸಿದ್ದೇನೆ. ಅಧ್ಯಕ್ಷನಾಗಿದ್ದಾಗ ಸಾಹಿತ್ಯ ಗ್ರಾಮದ ಕನಸು ಕಂಡು, ಅದನ್ನು ನನಸು ಮಾಡಿದ್ದೇನೆ. 50 ಲಕ್ಷಕ್ಕೂ ಹೆಚ್ಚು ಅನುದಾನ ನನ್ನ ಅವಧಿಯಲ್ಲೇ ಬಂದಿದೆ. 2011-12ರಲ್ಲಿ ಈ ಅನುದಾನ 1 ಕೋಟಿ ತಲುಪಿತು. ಹೀಗೆ ಕ್ರಿಯಾಶೀಲತೆಯಿಂದ ಕೆಲಸ ಮಾಡಿದ್ದೇನೆ. ತಾಲೂಕು ಭವನಗಳು, ಎಲ್ಲಾ ಹೋಬಳಿಗಳಲ್ಲಿ ಕಸಾಪ ಕಚೇರಿ, ಸಾಹಿತ್ಯ ಹುಣ್ಣೆಮೆ ಕಾರ್ಯಕ್ರಮಗಳು, ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಇವೆಲ್ಲವನ್ನು ಮಾಡಿದ ತೃಪ್ತಿ ನನಗಿದೆ ಎಂದರು.
ಈ ಬಾರಿ ನಾನು ಆಯ್ಕೆಯಾದರೆ ಸಾಹಿತ್ಯ ಗ್ರಾಮವನ್ನು ಮೂಲ ನೀಲ ನಕ್ಷೆಯಂತೆ ಪೂರ್ಣಗೊಳಿಸುವುದು, ತಾಲೂಕು ಕೇಂದ್ರಗಳಲ್ಲಿ ಅರ್ಧಕ್ಕೆ ನಿಂತುಹೋಗಿರುವ ಕಸಾಪ ಕಟ್ಟಡಗಳನ್ನು ಪೂರ್ಣಗೊಳಿಸುವುದು, ಹೊಸ ತಲೆಮಾರಿನ ಯುವಕರಿಗೆ ಸಾಹಿತ್ಯದ ಅಭಿರುಚಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತೇನೆ. ಜಾತ್ಯಾತೀತವಾಗಿ ಕೆಲಸ ಮಾಡುತ್ತೇನೆ. ಪುಸ್ತಕ ಪ್ರಕಟಣೆ, ಮಾರಾಟ ಮಾಡುವ ಹೊಸ ಚಿಂತನೆ ನನ್ನದು. ಕನ್ನಡದ ಮನಸ್ಸುಗಳನ್ನು ಪಕ್ಷ ಭೇದವಿಲ್ಲದೆ ಒಗ್ಗೂಡಿಸಿ ಕನ್ನಡದ ಕೆಲಸಗಳನ್ನು ಮಾಡುತ್ತೇನೆ. ಹೀಗಾಗಿ ಮತ್ತಷ್ಟು ಕೆಲಸ ಮಾಡಲು ನನಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಓದಿ: ವಿಜಯೇಂದ್ರ ದುಡ್ಡು ಹಂಚುವುದರಲ್ಲಿ ಮಾತ್ರ ಚಾಣಕ್ಯ, ಬೇರೆ ಯಾವುದರಲ್ಲೂ ಅಲ್ಲ: ಸಿದ್ದು ಟಾಂಗ್