ಶಿವಮೊಗ್ಗ: ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲಿಯೇ ಗಾಂಜಾ ಬೆಳೆದ ಎಂಬಿಬಿಎಸ್, ಎಂಡಿ ಓದುತ್ತಿದ್ದ ಮೂವರು ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ರಾಜ್ಯದ ವಿಘ್ನರಾಜ್ (28), ಪಾಂಡಿದೊರೈ (27) ಹಾಗೂ ಕೇರಳ ರಾಜ್ಯದ ವಿನೋದ್ ಕುಮಾರ್ (27) ಬಂಧಿತ ವಿದ್ಯಾರ್ಥಿಗಳಿ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಶಿವಮೊಗ್ಗದ ಪ್ರತಿಷ್ಠಿತ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಮಾಡುತ್ತಿದ್ದ ಮೂವರು ವಿದ್ಯಾರ್ಥಿಗಳು ತಾವು ಬಾಡಿಗೆ ಪಡೆದ ಮನೆಯಲ್ಲಿ ಪಾಲಿ ಹೌಸ್ ರೀತಿಯಲ್ಲಿ ಕೃತಕವಾಗಿ ಗಾಂಜಾ ಬೆಳೆಯುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶಿವಮೊಗ್ಗ ಗ್ರಾಮಾಂತರ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರಿಗೆ 227 ಗ್ರಾಂ ಒಣ ಗಾಂಜಾ, 1.530 ಕೆ.ಜಿ ಹಸಿ ಗಾಂಜಾ, 10 ಗ್ರಾಂ ಚರಸ್, ಗಾಂಜಾ ಬೀಜಗಳು, 3 ಕೆನಾಬಿಸ್ ಆಯಿಲ್ ಸಿರೀಂಜ್ ರೀತಿಯ ವಸ್ತುಗಳು, 3 ಕಬ್ಬಿಣದ ರಾಡುಗಳ ಮೇಲೆ ಕಪ್ಪು ಬಣ್ಣದ ಕವರ್ ಸುತ್ತಿದ ಸ್ಟಾಂಡ್ಗಳು, ಗಾಂಜಾ ಪುಡಿ ಮಾಡಲು ಬಳಸುವ 2 ಡಬ್ಬಿಗಳು, 1 ತೂಕದ ಯಂತ್ರ, 1 ಎಕ್ಸಿಟ್ ಫ್ಯಾನ್, 6 ಟೇಬಲ್ ಫ್ಯಾನ್, 2 ಸ್ಬಬಕಲೈಸರ್ , 3 ಎಲ್ಇಡಿ ಲೈಟ್, ರೋಲಿಂಗ್ ಪೇಪರ್, 2 ಹುಕ್ಕಾ ಕೊಳವೆ ಮತ್ತು 4 ಹುಕ್ಕಾ ಕ್ಯಾಪ್ಗಳು, ಗಾಂಜಾ ಗಿಡದ ಕಾಂಡಗಳು, 19 ಸಾವಿರ ರೂ.ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಬಂಧಿತರ ವಿರುದ್ದ 0195/2023 ಕಲಂ NDPS ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಬಂಧಿತರೆಲ್ಲರೂ ವೈದ್ಯಕೀಯ ವಿದ್ಯಾರ್ಥಿಗಳು. ಇದರಲ್ಲಿ ವಿಘ್ನರಾಜ್ ಎಂಬಾತ ಶಿವಮೊಗ್ಗದ ಶಿವಗಂಗಾ ಲೇಔಟ್ನಲ್ಲಿ ನ್ಯಾಯಾಧೀಶರೊಬ್ಬರ ಮನೆಯನ್ನು ಬಾಡಿಗೆ ಪಡೆದು ಕೃತ್ಯ ಎಸಗಿದ್ದಾರೆ. ಮನೆಯಲ್ಲಿಯೇ ಗಾಂಜಾವನ್ನು ಪಾಲಿ ಹೌಸ್ ಮಾದರಿಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಬೆಳೆದ ಪ್ರಕರಣ ಇದಾಗಿದೆ. ಗಾಂಜಾ ಬೆಳೆಯಲು ಗಾಂಜಾ ಬೀಜ, ಮಣ್ಣು, ಔಷಧ ಸೇರಿದಂತೆ ಎಲ್ಲಾವನ್ನು ಆನ್ಲೈನ್ನಲ್ಲಿಯೇ ಖರೀದಿ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ.
ಪಾಲಿ ಹೌಸ್ ಮಾದರಿಯಲ್ಲಿ ಮನೆಯಲ್ಲಿ ಸುಮಾರು 9 ಅಡಿ ಎತ್ತರದ ಬಾಕ್ಸ್ ನಿರ್ಮಾಣ ಮಾಡಿ, ಅದರಲ್ಲಿ ಗಾಂಜಾ ಬೆಳೆಯುತ್ತಿದ್ದರು. ಕೃತಕವಾಗಿ ಬೆಳೆಯಲು ಟೆಂಡ್ ಒಳಗೆ ಲೈಟ್, ಫ್ಯಾನ್ ಅಳವಡಿಸಿ, ಅಲ್ಲಿ ಸರಿಯಾದ ತಾಪಮಾನ ಇರುವಂತೆ ನೋಡಿಕೊಂಡಿದ್ದರು. ಕಳೆದ ಐದು ತಿಂಗಳಿನಿಂದ ಕೃತಕವಾಗಿ ಗಾಂಜಾ ಬೆಳೆಯುತ್ತಿದ್ದರು. ಬಂಧಿತ ಮೂವರರನ್ನು 11 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಎಸ್ಪಿ ಹೇಳಿದ್ದಾರೆ.
ಮನೆಯಲ್ಲಿ ಗಾಂಜಾ ಮಾರಾಟ- ಇಬ್ಬರ ಬಂಧನ: ಪ್ರತ್ಯೇಕ ಪ್ರಕರಣದಲ್ಲಿ ಮನೆಯಲ್ಲೇ ಗಾಂಜಾ ಮಾರಾಟ ಮಾಡುತ್ತಿದ್ದ ಖಾಸಗಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳನ್ನು ಜೂನ್ 22ರಂದು ಬಂಧಿಸಲಾಗಿತ್ತು. ಬಂಧಿತರಾದ ಅಬ್ದುಲ್ ಹಾಗೂ ಅರ್ಪಿತ ಎಂಬುವರು ಒಂದೇ ಮನೆಯಲ್ಲಿ ವಾಸವಾಗಿದ್ದರು. ಇವರು ತಾವು ವಾಸವಿದ್ದ ಮೂರನೇ ಮಹಡಿಯಿಂದ ಸಣ್ಣ ಸಣ್ಣ ಪ್ಯಾಕೇಟ್ನಲ್ಲಿ ಗಾಂಜಾವನ್ನು ಮಾರಾಟ ಮಾಡುತ್ತಿದ್ದರು. ಮೊದಲು ತಮಗೆ ಆನ್ಲೈನ್ನಲ್ಲಿ ಹಣ ಪೇಮೆಂಟ್ ಆದ ಬಳಿಕ ಗಾಂಜಾವನ್ನು ಮೇಲಿಂದ ಕೆಳಗೆ ಹಾಕುತ್ತಿದ್ದರು. ಈ ಕುರಿತು ಖಚಿತ ಮಾಹಿತಿ ಮೇರೆಗೆ ಇಬ್ಬರನ್ನು ಬಂಧಿಸಲಾಗಿದೆ. ಅಬ್ದುಲ್ ಕುಯ್ಯಂ ವಿಜಯಪುರದ ವಾಸಿಯಾಗಿದ್ದು, ಅರ್ಪಿತ ಬಳ್ಳಾರಿ ಜಿಲ್ಲೆಯ ಕೊಟ್ಟೂರು ನಿವಾಸಿಯಾಗಿದ್ದಾರೆ. ಇಬ್ಬರನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಜಾಮೀನು ಮಂಜೂರಾಗಿದೆ. ಗಾಂಜಾ ಪ್ರಕರಣ ಪತ್ತೆ ಹಚ್ಚಿದ ತಂಡಕ್ಕೆ ಎಸ್ಪಿ ಬಹುಮಾನ ಘೋಷಿಸಿದ್ದಾರೆ.
ಇದನ್ನೂ ಓದಿ: Fake License Scam: 500ಕ್ಕೂ ಹೆಚ್ಚು ನಕಲಿ ಡ್ರೈವಿಂಗ್ ಲೈಸನ್ಸ್ಗಳು ವಶಕ್ಕೆ, ಇಬ್ಬರು ಆರೋಪಿಗಳು ಅಂದರ್