ಶಿವಮೊಗ್ಗ: ಎಕ್ಸಿಕ್ಯೂಟಿವ್ ಎಂಜಿನಿಯರ್ ಪತ್ನಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಕಾರು ಚಾಲಕ ಸೇರಿದಂತೆ ಒಟ್ಟು ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಜೂ.17ರಂದು ಶಿವಮೊಗ್ಗ ನಗರದ ವಿಜಯ ನಗರದಲ್ಲಿ ಒಂಟಿ ಮಹಿಳೆಯ ಹತ್ಯೆ ಮಾಡಿ, ಸುಮಾರು 35 ಲಕ್ಷ ರೂ. ಹಣ ದೋಚಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಿಗಾಗಿ ತೀವ್ರ ಹುಡುಕಾಟ ನಡೆಸಿದ್ದರು. ಕೊನೆಗೂ ಆರೋಪಿಗಳು ಪೊಲೀಸರ ಅತಿಥಿಯಾಗಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಕಾರು ಚಾಲಕ ಹನುಮಂತ ನಾಯ್ಕ ಸೇರಿ ಒಟ್ಟು ಆರು ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಆರೋಪಿಗಳನ್ನು ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ ಏನು?: ಜೂನ್ 17ರಂದು ಶಿವಮೊಗ್ಗದ ವಿಜಯನಗರದ 2ನೇ ತಿರುವಿನಲ್ಲಿರುವ ನೀರಾವರಿ ಇಲಾಖೆ ಎಂಜಿನಿಯರ್ ಮನೆಯಲ್ಲಿ ಇಲ್ಲದ ಸಮಯದಲ್ಲಿ ಮನೆಗೆ ನುಗ್ಗಿದ್ದ ಆರೋಪಿಗಳು, ಎಂಜಿನಿಯರ್ ಪತ್ನಿ ಕಮಲಮ್ಮ ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ಬಳಿಕ ಆರೋಪಿಗಳು ತಲೆಮರೆಸಿಕೊಂಡಿದ್ದರು. ತನಿಖೆ ನಡೆಸಿದ ತುಂಗಾ ನಗರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Shivamogga crime: ಎಕ್ಸಿಕ್ಯೂಟಿವ್ ಇಂಜಿನಿಯರ್ ಪತ್ನಿ ಅನುಮಾನಾಸ್ಪದ ಸಾವು
ಚಿಲ್ಲರೆ ಹಣಕ್ಕಾಗಿ ಡಬಲ್ ಮರ್ಡರ್: ಮೈಸೂರು ಜಿಲ್ಲೆಯ ಹುಣಸೂರಿನ ಸಾಮಿಲ್ಯೊಂದರಲ್ಲಿ ಚಿಲ್ಲರೆ ಕಾಸಿಗಾಗಿ ನಡೆದ್ದ ಡಬಲ್ ಮರ್ಡರ್ ಕೇಸ್ನಲ್ಲಿ ಪ್ರಮುಖ ಆರೋಪಿ ಸೇರಿದಂತೆ ಮೂವರನ್ನು ಜೂನ್ 26ರಂದು ಹುಣಸೂರು ಪೊಲೀಸರು ಅರೆಸ್ಟ್ ಮಾಡಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಹುಣಸೂರು ತಾಲೂಕಿನ ಪರಸಯ್ಯನ ಛತ್ರದ ಸಮೀಪದ ಸಾಮಿಲ್ನಲ್ಲಿ ವಾಚ್ ಮ್ಯಾನ್ ವೆಂಕಟೇಶ್(70) ಮತ್ತು ಷಣ್ಮುಖ ಎಂಬುವವರು ಕೊಲೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಓರ್ವ ಬಾಲಾಪರಾಧಿ ಸೇರಿದಂತೆ ಮೂವರನ್ನು ಬಂಧಿಸಿದ್ದರು. ಆರೋಪಿಗಳಾದ ಅಭಿಷೇಕ್, ತೌಸಿಫ್ (30) ಹಾಗೂ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳಾಗಿದ್ದರು.
ಅಭಿಷೇಕ್, ತೌಸಿಫ್, ಬಾಲಕನೊಬ್ಬ ಸೇರಿ ಸಾಮಿಲ್ನ ವಾಚ್ ಮ್ಯಾನ್ ವೆಂಕಟೇಶ್ ಹಾಗೂ ಷಣ್ಮುಖ ಅವರನ್ನು ಕೊಲೆ ಮಾಡಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದು ಪೊಲೀಸರಿಗೆ ಪ್ರಮುಖ ಸುಳಿವು ಕೊಟ್ಟಿತ್ತು. ಇದರಿಂದಲೇ ಆರೋಪಿಗಳನ್ನು ಬಂಧನ ಮಾಡಿ, ನ್ಯಾಯಾಂಗಕ್ಕೆ ಒಪ್ಪಿಸಲಾಗಿತ್ತು. ಅಭಿಷೇಕ್ಗೆ ಸಹಾಯ ಮಾಡಿದ್ದ ಆರೋಪಿ ತೌಸಿಫ್ ಅಹಮದ್ ಖಾನ್(30) ಮಾದಕ ವ್ಯಸನಿಯಾಗಿದ್ದ. ಮಾದಕ ವಸ್ತುಗಳ ಮಾರಾಟಗಾರನು ಕೂಡ ಆಗಿದ್ದ. ಘಟನೆ ನಡೆದ ಹಿಂದಿನ ದಿನದಂದು ತೌಸಿಫ್ ಮೈಸೂರಿಗೆ ಆಗಮಿಸಿ ತನ್ನ ತಾಯಿಯನ್ನು ನೋಡಿ ವಾಪಸಾಗಿದ್ದ.
ಚಿಲ್ಲರೆ ಹಣಕ್ಕಾಗಿ ಕೊಲೆ: ಸಾಮಿಲ್ನ ವಾಚ್ ಮ್ಯಾನ್ ವೆಂಕಟೇಶ್ ಮತ್ತು ಷಣ್ಮುಖ ಅವರನ್ನು ಬರೀ ಚಿಲ್ಲರೆ ಹಣಕ್ಕಾಗಿ ಅಭಿಷೇಕ್, ತೌಸಿಫ್, ಬಾಲಾಪರಾಧಿ ಸೇರಿ ಹತ್ಯೆ ಮಾಡಿದ್ದಾರೆ. ಮಾದಕ ವಸ್ತುಗಳ ವ್ಯಸನಿಯಾಗಿದ್ದ ಆರೋಪಿಗಳು, ವಾಚ್ ಮ್ಯಾನ್ ವೆಂಕಟೇಶ್ ಮತ್ತು ಷಣ್ಮುಖ ಅವರನ್ನು ಹತ್ಯೆ ಮಾಡಿ, ಅವರ ಬಳಿ ಇದ್ದ 485 ರೂ.ಗಳನ್ನು ದೋಚಿಕೊಂಡು ಪರಾರಿಯಾಗಿದ್ದರು.