ಶಿವಮೊಗ್ಗ:ಕಾರಿನಲ್ಲಿ ದನಗಳನ್ನು ಕದ್ದು ಪರಾರಿಯಾಗುವ ವೇಳೆ ಕಾರು ಹಳ್ಳಕ್ಕೆ ಬಿದ್ದು, ಎರಡು ಹಸು ಸಾವನ್ನಪ್ಪಿದ್ದು, ಮೂವರು ದನಗಳ್ಳರಿಗೆ ಗಾಯಗಳಾಗಿರುವ ಘಟನೆ ಶಿವಮೊಗ್ಗ ತೋಟದಕೆರೆ ಗ್ರಾಮದ ಬಳಿ ನಡೆದಿದೆ.
ಶಿವಮೊಗ್ಗ ತಾಲೂಕಿನ ಉಂಬ್ಳೆಬೈಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಗಣೇದಾಳು ಗ್ರಾಮದ ವಿಠ್ಠಲ ಎಂಬುವವರ ಮನೆ ಕೊಟ್ಟಿಗೆಯಲ್ಲಿದ್ದ ಹಸುಗಳು ಕಾಣೆಯಾಗಿದ್ದವು. ಹಸುಗಳನ್ನು ಹುಡುಕುತ್ತಿದ್ದ ವೇಳೆ ಗಣೇದಾಳು ಗ್ರಾಮದಿಂದ ಎನ್.ಆರ್.ಪುರ ರಸ್ತೆಯ ತೋಟದಕೆರೆ ಗ್ರಾಮದ ಬಳಿ ಕಾರೊಂದು ಹಳ್ಳಕ್ಕೆ ಬಿದ್ದಿದೆ ಎಂದು ತಿಳಿದು ಬಂದಿದೆ. ಗ್ರಾಮಸ್ಥರು ಸ್ಥಳಕ್ಕಾಮಿಸಿ ನೋಡಿದಾಗ ಕಾರಿನಲ್ಲಿ ಮೂರು ಹಸು ಹಾಗೂ ಮೂವರು ಯುವಕರಿದ್ದರು. ಇದರಲ್ಲಿ ಎರಡು ಹಸುಗಳು ಸಾವನ್ನಪ್ಪಿದ್ದು, ಇನ್ನೂಂದು ಹಸುವಿಗೆ ತೀವ್ರ ಗಾಯಗಳಾಗಿವೆ. ಕಾರಿನಲ್ಲಿದ್ದ ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಕಾರಿನಲ್ಲಿದ್ದ ಯುವಕರನ್ನು ಶಿವಮೊಗ್ಗ ಸೊಳೆಬೈಲಿನ ಅಜ್ಜು, ಸುಹಾಲ್ ಹಾಗೂ ಯಾಸಿನ್ ಎಂದು ಗುರುತಿಸಲಾಗಿದ್ದು, ಇವರು ದನಗಳನ್ನು ಕಳ್ಳತನ ಮಾಡಿಕೊಂಡು ಹೋಗುವಾಗ ಕಾರು ಅಪಘಾತಕ್ಕೊಳಗಾಗಿದೆ. ಶಿವಮೊಗ್ಗ ಗ್ರಾಮಾಂತರ ಸಿಪಿಐ ಹಾಗೂ ಸಿಬ್ಬಂದಿ ಬಂದು ದನಗಳ್ಳರನ್ನು ಬಂಧಿಸಿದ್ದು, ಅವರು ಗಾಯಗೊಂಡಿದ್ದರಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.