ಶಿವಮೊಗ್ಗ: ನ್ಯಾಯಾಲಯಕ್ಕೆ ಹಾಜರಾಗುವ ಕಕ್ಷಿದಾರರಿಗೆ ಕಡ್ಡಾಯ ಕೊರೊನಾ ಪರೀಕ್ಷೆಗೆ ಆದೇಶ ನೀಡಲಾಗಿದ್ದು, ಶಿವಮೊಗ್ಗದಲ್ಲೂ ಈ ಆದೇಶ ಪಾಲನೆಯಾಗುತ್ತಿದೆ.
ರಾಜ್ಯದ ಹೈಕೋರ್ಟ್ ನಿರ್ದೇಶನದ ಮೇರೆಗೆ ಜಿಲ್ಲಾ ನ್ಯಾಯಾಲಯಗಳು ಈಗ ಕಡ್ಡಾಯ ಕೊರೊನಾ ಪರೀಕ್ಷೆ ನಡೆಸುತ್ತಿವೆ. ಶಿವಮೊಗ್ಗದ ಬಾಲರಾಜ್ ಅರಸ್ ರಸ್ತೆಯ ಜಿಲ್ಲಾ ಮುಖ್ಯ ನ್ಯಾಯಾಲಯದಲ್ಲಿ ಕಕ್ಷಿದಾರರಿಗೆ ಕಡ್ಡಾಯ ಕೊರೊನಾ ಪರೀಕ್ಷೆ ನಡೆಸಲಾಗುತ್ತಿದೆ. ಜಿಲ್ಲಾ ಪ್ರಧಾನ ನ್ಯಾಯಾಲಯದ ಗೇಟ್ನಲ್ಲಿ ವಕೀಲರು ತಮ್ಮ ಕಕ್ಷಿದಾರರನ್ನು ಕರೆ ತಂದಾಗ ಅವರಿಗೆ ಆ್ಯಂಟಿಜನ್ ಕಿಟ್ನಲ್ಲಿ ಕೊರೊನಾ ಪರೀಕ್ಷೆ ನಡೆಸಬೇಕು. ಪರೀಕ್ಷೆ ನಡೆಸಿ, ವರದಿಯಲ್ಲಿ ನೆಗೆಟಿವ್ ಬಂದರೆ ಮಾತ್ರ ಕೋರ್ಟ್ ಆವರಣದ ಒಳ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತಿದೆ.
ಕೋರ್ಟ್ ಮುಂಭಾಗ ಆರೋಗ್ಯ ಇಲಾಖೆಯಿಂದ ಕೋವಿಡ್ ಟೆಸ್ಟ್:
ಜಿಲ್ಲಾ ಪ್ರಧಾನ ನ್ಯಾಯಾಲಯದಲ್ಲಿ ಜಿಲ್ಲಾ ಆರೋಗ್ಯ ಇಲಾಖೆಯ ಸಿಬ್ಬಂದಿ ಕೋವಿಡ್ ಪರೀಕ್ಷೆ ನಡೆಸುತ್ತಿದ್ದಾರೆ. ಕೋವಿಡ್ ಪರೀಕ್ಷೆಗೂ ಮುನ್ನ ಅವರ ಮೊಬೈಲ್ ನಂಬರ್ ಪಡೆದು, ಮೊಬೈಲ್ಗೆ ಬರುವ OTP ನಂಬರ್ ಪಡೆದು ರಿಜಿಸ್ಟರ್ ಆಗಿ ನಂತರ ಪರೀಕ್ಷೆ ನಡೆಸಲಾಗುತ್ತದೆ. ಇಲ್ಲಿ ಆ್ಯಂಟಿಜನ್ ಕಿಟ್ ಮೂಲಕ ಪರೀಕ್ಷೆ ನಡೆಸಲಾಗುತ್ತಿದ್ದು, ಕೇವಲ 30 ನಿಮಿಷದೊಳಗೆ ವರದಿ ಲಭ್ಯವಾಗುತ್ತದೆ. ನೆಗೆಟಿವ್ ವರದಿ ಬಂದರೆ ಕೋರ್ಟ್ ಒಳಗೆ ಹೋಗಲು ಅವಕಾಶ ನೀಡಲಾಗುತ್ತದೆ. ಪಾಸಿಟಿವ್ ಬಂದ್ರೆ, ಅವರನ್ನು ಚಿಕಿತ್ಸೆಗೆ ಕರೆದುಕೊಂಡು ಹೋಗಲಾಗುತ್ತದೆ.
ಈ ಕೋವಿಡ್ ಟೆಸ್ಟ್ ಸಂಪೂರ್ಣ ಉಚಿತವಾಗಿದ್ದು, ಪ್ರತಿಯೊಬ್ಬರು ಭಯಬಿಟ್ಟು ಪರೀಕ್ಷೆಗೆ ಒಳಗಾಗಬೇಕಿದೆ. ನ್ಯಾಯಾಲಯಗಳು ಕೋವಿಡ್ ಲಾಕ್ಡೌನ್ನಲ್ಲಿ ತಮ್ಮ ಕಲಾಪಗಳನ್ನು ಸ್ಥಗಿತಗೊಳಿಸಿದ್ದವು. ಇದೀಗ ಮತ್ತೆ ಕಲಾಪಗಳು ಪ್ರಾರಂಭವಾಗಿವೆ. ಬೆಳಗ್ಗೆ 10 ಪ್ರಕರಣಗಳು ಹಾಗೂ ಮಧ್ಯಾಹ್ನ 10 ಪ್ರಕರಣಗಳನ್ನು ಮಾತ್ರ ವಿಚಾರಣೆ ನಡೆಸಲಾಗುತ್ತಿದೆ. ಕೋರ್ಟ್ಗೆ ಬರುವ ವ್ಯಕ್ತಿಗಳಿಂದ ಅಲ್ಲಿನ ಸಿಬ್ಬಂದಿಗೆ ಕೊರೊನಾ ಬರುವ ಸಾಧ್ಯತೆ ಇರುತ್ತದೆ. ಪರಿಣಾಮ, ನ್ಯಾಯಾಲಯವನ್ನೇ ಸ್ಯಾನಿಟೈಸರ್ ಮಾಡಬೇಕಾಗುತ್ತದೆ. ಇದರಿಂದ ಇತರೆ ಸಿಬ್ಬಂದಿಗೂ ಭಯ ಉಂಟಾಗಿ ಕೆಲಸಕ್ಕೆ ಗೈರಾಗುವ ಸಾಧ್ಯತೆಯನ್ನು ಮನಗಂಡು, ಹೈ ಕೋರ್ಟ್ ಈ ಆದೇಶ ನೀಡಿದೆ. ಅದರಂತೆ ಜಿಲ್ಲಾ ನ್ಯಾಯಾಲಯ ಕೋವಿಡ್ ಪರೀಕ್ಷೆ ಕಡ್ಡಾಯಗೊಳಿಸಿದೆ ಎನ್ನುತ್ತಾರೆ ವಕೀಲರಾದ ಶ್ರೀಪಾಲ್ರವರು.