ಶಿವಮೊಗ್ಗ, ಹುಬ್ಬಳ್ಳಿ, ಬಳ್ಳಾರಿ : ಕಾಂಗ್ರೆಸ್ ನಾಯಕರ ಇಡಿ ವಿಚಾರಣೆ ಸಂಬಂಧ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರ ಮತ್ತು ಜಾರಿ ನಿರ್ದೇಶನಾಲಯ ವಿರುದ್ಧ ಶಿವಮೊಗ್ಗ, ಹುಬ್ಬಳ್ಳಿ, ಬಳ್ಳಾರಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮಹಾವೀರ ವೃತ್ತದವರೆಗೂ ಪ್ರತಿಭಟನೆ ನಡೆಸಲಾಯಿತು. ಮಹಾವೀರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಾಣ ಮಾಡಿ ಇಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಾಯಿತು.
ಪ್ರತಿಭಟನೆ ನಡೆಸುತ್ತಿದ್ದ ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಏಕಾಏಕಿ ಜಿಲ್ಲಾಧಿಕಾರಿ ಕಚೇರಿ ಕಡೆ ಹೊರಟಾಗ ಪೊಲೀಸರು ಅವರನ್ನು ತಡೆಯಲು ಯತ್ನಿಸಿದರೂ ಸಹ ಕಾರ್ಯಕರ್ತರು ಮುಂದೆ ನುಗ್ಗಿದ ಪರಿಣಾಮ ಜಿಲ್ಲಾಧ್ಯಕ್ಷ ಸುಂದರೇಶ್ ಸೇರಿದಂತೆ ಐವತ್ತಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಲಾಯಿತು.
ಹುಬ್ಬಳ್ಳಿ : ನವನಗರದ ಐಟಿ ಕಚೇರಿ ಎದುರು ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಬೃಹತ್ ರ್ಯಾಲಿಯ ಮೂಲಕ ಆಗಮಿಸಿದ ಕಾಂಗ್ರೆಸ್ ಕಾರ್ಯಕರ್ತರು ಐಟಿ ಹಾಗೂ ಇಡಿ ಇಲಾಖೆಯನ್ನು ಬಿಜೆಪಿ ದುರುಪಯೋಗ ಮಾಡಿಕೊಂಡು ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು. ಕಾರ್ಯಕರ್ತರು ಆದಾಯ ತೆರಿಗೆ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದ್ದು, ಈ ವೇಳೆ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೋಲಿಸರು ಬಂಧಿಸಿದರು. ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಗ್ರಾಮೀಣ ಘಟಕದ ಅಧ್ಯಕ್ಷ ಅನಿಲ್ ಕುಮಾರ್ ಪಾಟೀಲ್ ಸೇರಿ ಹಲವು ಮುಖಂಡರನ್ನು ಬಂಧಿಸಲಾಯಿತು.
ಬಳ್ಳಾರಿ : ಬಳ್ಳಾರಿ ರಾಯಲ್ ವೃತ್ತದಲ್ಲಿ ಗ್ರಾಮೀಣ ಶಾಸಕ ನಾಗೇಂದ್ರ ನೇತೃತ್ವದಲ್ಲಿ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಇಡಿಯನ್ನು ದುರ್ಬಳಕೆ ಮಾಡುತ್ತಿದೆ ಎಂದು ಆರೋಪಿಸಿದರು. ಇಡಿ ವಿಚಾರಣೆ ಹೆಸರಿನಲ್ಲಿ ನಮ್ಮ ಪಕ್ಷದ ನಾಯಕರನ್ನು ವಿಚಾರಣೆ ಮಾಡೋದು ಸರಿಯಲ್ಲ. ಅಧಿಕಾರದಲ್ಲಿರುವವರು ಏನು ಬೇಕಾದರೂ ಮಾಡಬಹುದೆಂದು ಅಂದುಕೊಂಡಿದ್ದಾರೆ. ಈ ದಬ್ಬಾಳಿಕೆ ನಿಲ್ಲುವವರೆಗೂ ಪ್ರತಿಭಟನೆ ನಿಲ್ಲೋದಿಲ್ಲ ಎಂದು ನಾಯಕರು ಕಿಡಿಕಾರಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಉಸಿರಾಟದ ಸಮಸ್ಯೆ : ಮುಂದುವರಿದ ಚಿಕಿತ್ಸೆ!