ಶಿವಮೊಗ್ಗ: ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ರೈತ ವಿರೋಧಿ, ಜನ ವಿರೋಧಿ, ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದಿದ್ದಾರೆ.
ಹಾಗಾಗಿ, ಇನ್ಮುಂದೆ ಅವರನ್ನು ರೈತರ ಮಗ ಎಂದು ಯಾರು ಕರೆಯದೇ ಕಾರ್ಪೊರೇಟ್ ಕಂಪನಿಗಳ ಸಾಕುಮಗ ಎಂದು ಕರೆಯಿರಿ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡೀ ದೇಶ ಕೊರೊನಾ ವೈರಸ್ನಿಂದ ತತ್ತರಿಸಿಹೋಗಿದೆ. ರೈತರ ಉತ್ಪನ್ನಗಳಿಗೆ ಮಾರುಕಟ್ಟೆಯಲ್ಲಿ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ದುಡಿಯುವ ವರ್ಗ ಕೆಲಸ ಇಲ್ಲದೆ ಪರದಾಡುತ್ತಿದೆ.
ಇಂತಹ ಸಂದರ್ಭದಲ್ಲಿ ಪ್ರಧಾನಿಗಳು ಹಾಗೂ ಮುಖ್ಯಮಂತ್ರಿಗಳು ಜನವಿರೋಧಿ,ಕಾರ್ಮಿಕ ವಿರೋಧಿ,ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದು ಆರೋಪಿಸಿದರು.
ರಾಜ್ಯದ ಅನೇಕ ಭಾಗಗಳಲ್ಲಿ ಪ್ರವಾಹ, ನೆರೆ ಸಂಭವಿಸಿ ಅನೇಕ ರೈತರು ಜಮೀನುಗಳನ್ನು ಕಳೆದುಕೊಂಡಿದ್ದಾರೆ. ಅಂತವರಿಗೆ ಇನ್ನು ಪರಿಹಾರ ಸಿಕ್ಕಿಲ್ಲ. ಹಾಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಗೆ ಪ್ರೀಮಿಯಂ ಹಣ ತುಂಬಿದ ರೈತರಿಗೆ ಪರಿಹಾರ ಕೊಟ್ಟಿಲ್ಲ. ಇಷ್ಟಾದರೂ ಸರ್ಕಾರ ಮಾತ್ರ ಇಲ್ಲಿವರೆಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸಿಲ್ಲ.
ಹೀಗಿರುವಾಗ ದೇಶದ ಆರ್ಥಿಕತೆ ದಿವಾಳಿಯಾಗಿದೆ ಎಂದು ತಿಳಿದುಕೊಳ್ಳಬೇಕು ಅಥವಾ ಕೇಂದ್ರ ಸರ್ಕಾರಕ್ಕೆ ಕರ್ನಾಟಕಕ್ಕೆ ಪರಿಹಾರ ನೀಡಲು ಮನಸ್ಸಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ರೈತರಿಗೆ ಗೊತ್ತಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.