ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸ್ವಕ್ಷೇತ್ರ ಶಿಕಾರಿಪುರದಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ನೇರವೇರಿಸಿದರು.
ಶಿಕಾರಿಪುರದ ಸಾಂಸ್ಕೃತಿಕ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ ಅವರು ತೂಗರ್ಸಿ ಪಶು ಚಿಕಿತ್ಸಾಲಯ ಕಟ್ಟಡ, ಬಿಳಕಿ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ, ಶಿಕಾರಿಪುರ ಟೌನ್ ಮೆಟ್ರಿಕ್ ಪೂರ್ವ ಬಾಲಕಿಯರ ವಿದ್ಯಾರ್ಥಿ ನಿಲಯ, ಶಿರಾಳಕೊಪ್ಪ ಪಟ್ಟಣ ಪಂಚಾಯತ್ ಘನತ್ಯಾಜ್ಯ ವಸ್ತು ನಿರ್ವಹಣಾ ಘಟಕಗಳನ್ನು ಉದ್ಘಾಟನೆ ಮಾಡಿದರು.
125.17 ಕೋಟಿ ರೂ. ಕಸಬಾ(ಕಲ್ಲುವಡ್ಡು ಹಳ್ಳ) ಹಾಗೂ ಕುಮದ್ವತಿ ನದಿಗಳು ಕಸಬಾ ಹೋಬಳಿಯ ಕಾಳೇನಹಳ್ಳಿ ಗ್ರಾಮದ ಬಳಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ, ಇದು ಶಿಕಾರಿಪುರ ಹಾಗೂ ಸೊರಬ ತಾಲೂಕಿನ ರೈತರ ಜಮೀನಿಗೆ ನೀರು ಒದಗಿಸುತ್ತದೆ. ಶಿಕಾರಿಪುರ ತಾಲೂಕಿನ 2,730 ಹೆಕ್ಟೇರ್ ಭೂಮಿ ಹಾಗೂ ಸೊರಬದ 3,430 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸುತ್ತದೆ.
ಅದೇ ರೀತಿ ಶಿವಶರಣೆ ಅಕ್ಕ ಮಹಾದೇವಿರವರ ಜನ್ಮಸ್ಥಳ ಉಡುತಡಿಯನ್ನು 5 ಕೋಟಿ ರೂ. ವೆಚ್ಚದ ಸಮಗ್ರ ಅಭಿವೃದ್ಧಿಗೆ ಚಾಲನೆ, ಭಕ್ತನಕೊಪ್ಪ, ಅಂಬಾರಕೊಪ್ಪದ 110/11 ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಶಂಕುಸ್ಥಾಪನೆ, ಶಿಕಾರಿಪುರ ಗ್ರಾಮಾಂತರ ರಸ್ತೆಗಳ ಅಭಿವೃದ್ಧಿ ಸೇರಿ ಒಟ್ಟು ನೂರಾರು ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಸಚಿವರಾದ ಕೆ.ಎಸ್. ಈಶ್ವರಪ್ಪ, ನಾರಾಯಣಗೌಡ, ಸಂಸದರಾದ ಬಿ.ವೈ. ರಾಘವೇಂದ್ರ, ಗೃಹಮಂಡಳಿಯ ಅಧ್ಯಕ್ಷ ಆರಗ ಜ್ಞಾನೇಂದ್ರ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಚಿವ ಆರ್. ಶಂಕರ್ ಸೇರಿ ಇತರರು ಹಾಜರಿದ್ದರು.