ಶಿವಮೊಗ್ಗ: ಪ್ರಜಾಪ್ರಭುತ್ವದ ಯಶಸ್ವಿಗೆ ಹಾಗೂ ಸಮಾಜದ ಸ್ಯಾಥ್ಯ ಕಾಪಾಡಲು ನಿರ್ಭಿತ ಮಾಧ್ಯಮಗಳು ಮುಖ್ಯ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅಭಿಪ್ರಾಯ ಪಟ್ಡಿದ್ದಾರೆ.
ಸರ್ಕಾರಿ ನೌಕರರ ಭವನದಲ್ಲಿ ನಡೆದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಎರಡನೇ ಹಂತದ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪತ್ರಕರ್ತರ ಕ್ಷೇಮಾಭಿವೃದ್ದಿ ಸರ್ಕಾರದ ಆದ್ಯತೆಯಾಗಿದೆ. ಸರ್ಕಾರ ಹಾಗೂ ಮಾಧ್ಯಮಗಳ ನಡುವೆ ಆರೋಗ್ಯಕರ ಸಂಬಂಧ ಇದ್ದಾಗ ಮಾತ್ರ ರಾಜ್ಯಕ್ಕೆ ಹಾಗೂ ದೇಶಕ್ಕೆ ಒಳ್ಳೆಯದಾಗಲು ಸಾಧ್ಯ. ಒಳ್ಳೆಯ ಕೆಲಸಗಳನ್ನು ಮೆಚ್ಚಿ, ತಪ್ಪುಗಳನ್ನು ಟೀಕಿಸುವ ಮಾಧ್ಯಮದ ಹೊಣೆಗಾರಿಕೆಯನ್ನು ಮೆಚ್ಚುವಂತದ್ದು ಎಂದರು.
ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಸಾವಿರಾರು ಕೋಟಿ ರೂ.ಗಳನ್ನು ನೀಡಲಾಗಿದೆ. ವಿಮಾನ ನಿಲ್ದಾಣ ಇನ್ನೊಂದು ವರ್ಷದಲ್ಲಿ ಕಾಮಗಾರಿ ಪೂರ್ಣಗೊಳ್ಳುತ್ತದೆ. ಮಳೆ ಬಂದ ಕಾರಣ ಕಾಮಗಾರಿ ನಿಧಾನವಾಗಿದೆ. ಕೋವಿಡ್ನಿಂದಾಗಿ ಸಂಕಷ್ಟದಲ್ಲೂ ಸಹ ಹಣ ಬಿಡುಗಡೆ ಮಾಡಲಾಗುತ್ತದೆ. ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಪತ್ರಕರ್ತರ ಸಂಬಂಧ ಅತಿ ಮುಖ್ಯವಾಗಿದೆ ಎಂದರು.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ಮೊದಲು ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ. ಈಗ ಎರಡನೇ ಹಂತದ ಕಾಮಗಾರಿಗೆ 75 ಲಕ್ಷ ರೂ. ಬಿಡುಗಡೆ ಮಾಡಲಾಗುತ್ತಿದೆ ಎಂದರು. ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಸೇರಿ ಇತರರರು ಹಾಜರಿದ್ದರು.