ಶಿವಮೊಗ್ಗ : ಮಲೆನಾಡಿನಲ್ಲಿ ಮಳೆ ಮುಂದುವರೆದಿದೆ. ವರುಣನ ಆರ್ಭಟಕ್ಕೆ ಮರವೊಂದು ಮನೆ ಮೇಲೆ ಬಿದ್ದು ಹಾನಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ. ಸಾಗರ ಪಟ್ಟಣದ 25 ನೇ ವಾರ್ಡ್ನಲ್ಲಿ ಸುಮಾರು 100 ವರ್ಷ ಹಳೆಯದಾದ ಮರ ಧರೆಗುರುಳಿದ್ದು, ಪರಿಣಾಮ ನಗರಸಭೆ ಸದಸ್ಯೆ ಮಧುಮಾಲತಿ ಎಂಬುವರ ಮನೆ ಸಂಪೂರ್ಣ ಜಖಂ ಆಗಿದೆ.
ಏಕಾಏಕಿ ಮರ ಬಿಳುವ ಶಬ್ದ ಕೇಳಿದ ಕೂಡಲೇ ಕುಟುಂಬಸ್ಥರೆಲ್ಲಾ ಮನೆಯ ಹಿಂಭಾಗಕ್ಕೆ ಓಡಿ ಹೋಗಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಧುಮಾಲತಿ ಅವರ ಮನೆಯ ಜೊತೆಗೆ ಪಕ್ಕದ ಮೂರು ಮನೆಗಳಿಗೂ ಹಾನಿಯಾಗಿದೆ. ಬೃಹತ್ ಗಾತ್ರದ ಮರ ಬಿದ್ದ ಹಿನ್ನೆಲೆ ಮನೆಯಲ್ಲಿದ್ದವರೆಲ್ಲಾ ಗಾಬರಿಗೊಂಡಿದ್ದಾರೆ. ಜೊತೆಗೆ, ಮನೆ ಮುಂದೆ ನಿಲ್ಲಿಸಿದ್ದ ಕಾರು ಹಾಗೂ ಬೈಕ್ಗಳು ಜಖಂಗೊಂಡಿವೆ. ಸ್ಥಳಕ್ಕೆ ನಗರಸಭೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಮಧುಮಾಲತಿ, "ಮನೆ ಮೇಲೆ ಮರ ಬಿದ್ದ ಹಿನ್ನೆಲೆ ಎಲ್ಲರೂ ಗಾಬರಿಗೊಂಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ನಮ್ಮ ನಗರಸಭೆ ಅಧಿಕಾರಿಗಳು ಆಗಮಿಸಿ, ಪರಿಶೀಲಿಸಿದ್ದಾರೆ ಎಂದರು. ಬಳಿಕ ಮಾತನಾಡಿದ ಸ್ಥಳೀಯರಾದ ಗೋಪಾಲ ಎಂಬುವರು, "ಮರ ಬಿದ್ದು ಹಾನಿಯಾಗಿರುವ ಮನೆಗಳಿಗೆ ಹಾಗೂ ವಾಹನಗಳಿಗೆ ನಗರಸಭೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : ಬೆಂಗಳೂರಿನಲ್ಲಿ ಧರೆಗುರುಳಿದ ಬೃಹತ್ ಮರ: ಏಳೆಂಟು ಕಾರುಗಳು ಜಖಂ, ಕೆಲವರಿಗೆ ಗಾಯ
ಧರೆಗುರುಳಿದ ಬೃಹತ್ ಮರ : ಬೆಂಗಳೂರು ನಗರದಲ್ಲಿ ಜುಲೈ 14 ರ ಸಂಜೆ ಸುರಿದ ಸಾಧಾರಣ ಮಳೆಗೆ ಬೃಹತ್ ಮರವೊಂದು ಧರೆಗುರುಳಿ ಅನಾಹುತ ಸೃಷ್ಟಿಸಿತ್ತು. ಕನ್ನಿಂಗ್ ಹ್ಯಾಮ್ ರಸ್ತೆಯ ಚಂದ್ರಿಕಾ ಹೋಟೆಲ್ ಕಾರ್ನರ್ ಬಳಿ ಘಟನೆ ನಡೆದಿತ್ತು. ಈ ವೇಳೆ ರಾಜಶೇಖರ್ (18) ಎಂಬ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿದ್ದ, ಈತನನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರ ಬಿದ್ದ ರಭಸಕ್ಕೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ಹಾಗೂ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಏಳೆಂಟು ಕಾರುಗಳು ಜಖಂಗೊಂಡಿವೆ. ಘಟನೆಯಿಂದ ಕೂದಲೆಳೆ ಅಂತರದಲ್ಲಿ ಹಲವರು ಪಾರಾಗಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು.
ಇದನ್ನೂ ಓದಿ : Monsoon Rain : ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ.. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ನದಿಗಳು, ಭೂಮಿ ಕುಸಿತ , ಕಾಲುಸಂಕ ಮುಳುಗಡೆ
ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಕೂಳೂರು ಸಮೀಪದ ಮಡುವಿನಕೆರೆ ಗ್ರಾಮದಲ್ಲಿ ಇದೇ ಜುಲೈ 8 ರಂದು ಮಳೆ, ಗಾಳಿಗೆ ಬೃಹತ್ ಗಾತ್ರದ ಹಲಸಿನ ಮರ ಬಿದ್ದಿತ್ತು. ಮರ ಬಿದ್ದ ಪರಿಣಾಮ ನಾರಾಯಣ ಎಂಬುವರ ಕೊಟ್ಟಿಗೆ ಸಂಪೂರ್ಣ ನೆಲಕಚ್ಚಿದ್ದು, ಮನೆಯ ಅರ್ಧ ಭಾಗಕ್ಕೆ ಹಾನಿಯಾಗಿತ್ತು. ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸೇರಿದಂತೆ ಅಪಾರ ನಷ್ಟ ಸಂಭವಿತ್ತು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನೂ ಓದಿ : Monsoon Rain : ದಕ್ಷಿಣ ಕನ್ನಡದಲ್ಲಿ ಭಾರಿ ಮಳೆ.. ಖಾಸಗಿ ಶಿಕ್ಷಣ ಸಂಸ್ಥೆಯ ಮೇಲ್ಛಾವಣಿ ಕುಸಿತ, ರಜೆ ಹಿನ್ನೆಲೆ ತಪ್ಪಿತು ದುರಂತ