ಶಿವಮೊಗ್ಗ: ಕೊರೊನಾ ಹಾವಳಿಯಿಂದ ಶಾಲಾ-ಕಾಲೇಜುಗಳನ್ನು ತೆರೆಯಬಾರದು, ಅದರಲ್ಲೂ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪರೀಕ್ಷೆಯ ನೆಪದಲ್ಲಿ ತರಗತಿ ನಡೆಸಬಾರದು ಎಂದು ಸರ್ಕಾರ ಆದೇಶ ನೀಡಿದ್ದರೂ ಶಿವಮೊಗ್ಗದ ಪ್ರತಿಷ್ಠಿತ ಶಾಲೆಯೊಂದರಲ್ಲಿ ಪಾಠ ಮಾಡಲಾಗಿದೆ ಎನ್ನಲಾಗಿದೆ.
ಶಿವಮೊಗ್ಗದ ಶರಾವತಿ ನಗರದಲ್ಲಿ ಇರುವ ಶಾಲೆಯಲ್ಲಿ ಇಂದು 10ನೇ ತರಗತಿಯ ವಿದ್ಯಾರ್ಥಿಗಳು ಪುನರ್ ಮನನಕ್ಕೆ ತಪ್ಪದೆ ಶಾಲಾ ಸಮವಸ್ತ್ರದಲ್ಲಿ ಹಾಜರಾಗುವಂತೆ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳ ಪೋಷಕರಿಗೆ ವಾಟ್ಸಪ್ ಮೆಸೇಜ್ ಮಾಡಿದ್ದರಂತೆ.
ಮೆಸೇಜ್ ನೋಡಿದ ತಕ್ಷಣ ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದಾರೆ. ಪುನರ್ ಮನನ ತರಗತಿ ಬೆಳಗ್ಗೆ 9ರಿಂದ ಮಧ್ಯಾಹ್ನ 1:30ರ ತನಕ ಎಂದು ಹೇಳಿದ್ದಾರೆ. ಶಾಲೆಯಿಂದ ಬಂದ ಮೆಸೇಜ್ ನೋಡಿದ ಪೋಷಕರು ಶಾಲೆಗೆ ಮಕ್ಕಳನ್ನು ಬಿಟ್ಟಿದ್ದಾರೆ.
ಈ ವಿಚಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೆ ಹೋಗಿದೆ. ತಕ್ಷಣ ಶಾಲೆಗೆ ಭೇಟಿ ನೀಡಿ ಬಿಇಒ ನಾಗರಾಜ್ ಪರಿಶೀಲನೆ ನಡೆಸಿದ್ದಾರೆ. ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದು, ನೋಟಿಸ್ ನೀಡುವ ಎಚ್ಚರಿಕೆ ನೀಡಿದ್ದಾರೆ.