ಶಿವಮೊಗ್ಗ: ಇಂದು ನಡೆಯುವ ವಿಜಯದಶಮಿ ಮೆರವಣಿಗೆಯಲ್ಲಿ ಭಾಗಿಯಾಗಲು ಬಂದಿದ್ದ ನೇತ್ರಾವತಿ ಆನೆ ನಿನ್ನೆ ರಾತ್ರಿ ಮರಿಯಾನೆಗೆ ಜನ್ಮ ನೀಡಿದೆ. ಕಳೆದ ಮೂರು ದಿನಗಳಿಂದ ಸಕ್ರೆಬೈಲು ಆನೆ ಬಿಡಾರದಿಂದ ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ನಡೆಯುವ ದಸರಾದಲ್ಲಿ ಭಾಗಿಯಾಗಲು ಸಾಗರ, ಹೇಮಾವತಿ ಜತೆ ನೇತ್ರಾವತಿ ಬಂದಿದ್ದಳು. ನೇತ್ರಾವತಿ ಆನೆ ಗರ್ಭಿಣಿಯಾಗಿದ್ದಳು ಎಂಬ ಅಂಶ ಇಲ್ಲಿನ ವೈದ್ಯಾಧಿಕಾರಿಗಳಿಗೆ ತಿಳಿದಿರಲಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ನಿನ್ನೆ ರಾತ್ರಿ ನೇತ್ರಾವತಿ ಆನೆಯು ತನ್ನ ಐದನೇ ಮರಿಗೆ ಜನ್ಮ ನೀಡಿತು. ಇದು ಆನೆ ನೋಡಿಕೊಳ್ಳುವ ಕಾವಾಡಿ ಹಾಗೂ ಮಾವುತರಿಗೂ ಸಹ ಅಚ್ಚರಿ ತಂದಿದೆ. ಮರಿ ಆರೋಗ್ಯವಾಗಿದೆ. ಜನನವಾದ 10 ನಿಮಿಷದಲ್ಲಿಯೇ ಎದ್ದು ತಾಯಿಯ ಹಾಲು ಕುಡಿಯಲು ಪ್ರಾರಂಭಿಸಿದೆ.
ನೇತ್ರಾವತಿ ಮರಿ ಹಾಕುತ್ತಿದ್ದಂತೆಯೇ ಅಲ್ಲೇ ಇದ್ದ ಹೇಮಾವತಿ ಮರಿಯನ್ನು ಆರೈಕೆ ಮಾಡಿದೆ. ರಾತ್ರಿಯೇ ಸಕ್ರೆಬೈಲು ಆನೆ ಬಿಡಾರದ ವೈದ್ಯಾಧಿಕಾರಿ ಡಾ.ವಿನಯ್ ಹಾಗೂ ಡಿಎಫ್ಓ ಪ್ರಸನ್ನ ಪಟಗಾರ್ ಆಗಮಿಸಿ ಆನೆಯನ್ನು ವೀಕ್ಷಿಸಿದ್ದಾರೆ. ತಾಯಿ ಹಾಗೂ ಮರಿ ಆನೆ ಆರೋಗ್ಯವಾಗಿವೆ. ಇದರಿಂದ ಸಕ್ರೆಬೈಲಿನ ಆನೆಯ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ನೇತ್ರಾವತಿ ಆನೆ 25 ವರ್ಷದ ಪ್ರಾಯವಾಗಿದ್ದು, ಇದುವರೆಗೂ 5 ಮರಿಗಳಿಗೆ ಜನ್ಮ ನೀಡಿದೆ. ಈಗಾಗಲೇ ಮೂರು ಮರಿಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಲಾಗಿದೆ. ಕಳೆದ ಎರಡು ವರ್ಷದ ಹಿಂದೆ ಜನಿಸಿದ ಮರಿಗೆ ಪುನೀತ್ ಎಂದು ನಾಮಕರಣ ಮಾಡಲಾಗಿತ್ತು. ಆನೆಗಳು ಸಾಮಾನ್ಯವಾಗಿ ಕಾಡಿನಲ್ಲಿ ಮರಿ ಹಾಕುತ್ತವೆ. ಇದೇ ರೀತಿ ಕಳೆದ ಎರಡು ವರ್ಷದ ಹಿಂದೆ ಮೈಸೂರಿನ ದಸರಾಗೆ ಬಂದಿದ್ದ ಆನೆ ಸಹ ಮರಿ ಹಾಕಿದ್ದನ್ನು ನೆನಪಿಸಿಕೊಳ್ಳಬಹುದು.
ತಾಯಿ, ಮರಿ ಸಕ್ರೆಬೈಲಿಗೆ ಶಿಫ್ಟ್: ವೈದ್ಯಾಧಿಕಾರಿ ವಿನಯ್ ನೇತೃತ್ವದಲ್ಲಿ ನೇತ್ರಾವತಿ ಹಾಗೂ ಮರಿ ಆನೆಯನ್ನು ಸಕ್ರೆಬೈಲಿಗೆ ಶಿಫ್ಟ್ ಮಾಡಲಾಯಿತು. ಸಾಮಾನ್ಯವಾಗಿ ಆನೆಗಳು ಗರ್ಭಿಣಿಯಾದಾಗ ಅದು ಆನೆಯನ್ನು ನೋಡಿಕೊಳ್ಳುವ ಮಾವುತರಿಗೆ ತಿಳಿದು ಬರುತ್ತದೆ. ಅಲ್ಲದೇ ವೈದ್ಯರಿಗೂ ಸಹ ಗೊತ್ತಾಗುತ್ತದೆ. ಆದರೆ, ನೇತ್ರಾವತಿ ಆನೆಯಲ್ಲಿ ಗರ್ಭಿಣಿಯಾದ ಯಾವ ಲಕ್ಷಣಗಳು ಕಂಡು ಬಂದಿರಲಿಲ್ಲ. ಅಲ್ಲದೆ, ಆನೆಯ ಹೊಟ್ಟೆ ದೊಡ್ಡದಾಗುವುದು ಕಾಣುತ್ತದೆ. ಕಳೆದ ಮೂರು ದಿನಗಳಿಂದ ನಗರದಲ್ಲಿ ಅಂಬಾರಿಗಾಗಿ ತಾಲೀಮು ನಡೆಸಿದಾಗಲು ಆನೆ ಸುಸ್ತಾಗಾವುದು ಅಥವಾ ಕುಳಿತುಕೊಳ್ಳುವುದು ಮಾಡಿಲ್ಲ. ಆನೆ ಮರಿ ಹಾಕಬೇಕಾದ ಸಂದರ್ಭದಲ್ಲಿ ಆನೆಯು ಬೇರೆಯಾಗಿ ವರ್ತನೆ ಇರುತ್ತದೆ. ಆದರೆ ಇಲ್ಲಿ ಯಾವ ಲಕ್ಷಣಗಳು ಕಂಡು ಬಂದಿರಲಿಲ್ಲ. ಇದೀಗ ತಾಯಿ ಹಾಗೂ ಮರಿ ಆರೋಗ್ಯವಾಗಿವೆ ಎಂದು ಡಾ.ವಿನಯ್ ತಿಳಿಸಿದ್ದಾರೆ.
ಶಿವಮೊಗ್ಗ ದಸರಾದಲ್ಲಿ ಬೆಳ್ಳಿ ಮಂಟಪದಲ್ಲಿ ತಾಯಿ ಚಾಮುಂಡೇಶ್ವರಿಯ ಅಂಬಾರಿ ಮೆರವಣಿಗೆ ನಡೆಸಲಾಗುತ್ತದೆ. ಇದಕ್ಕಾಗಿ ಸಾಗರ, ಹೇಮಾವತಿ ಹಾಗೂ ನೇತ್ರಾವತಿ ಆನೆಗಳು ಬಂದಿದ್ದವು. ಇವುಗಳು ಕಳೆದ ಮೂರು ದಿನಗಳಿಂದ ನಗರದಲ್ಲಿ ತಾಲೀಮು ನಡೆಸಿವೆ. ನಮ್ಮ ದಸರಾ ಆಚರಣೆಗೆ ಬಂದಿದ್ದ ಆನೆ ಮರಿ ಹಾಕುತ್ತದೆ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆದರೆ ದೇವರ ಆಟ ಎನ್ನುವಂತೆ ನೇತ್ರಾವತಿ ಆನೆ ಮರಿ ಹಾಕಿರುವುದು ಸಂತೋಷವಾಗಿದೆ. ಈಗ ನೇತ್ರಾವತಿ ಆನೆ ಮರಿ ಹಾಕಿದ ಕಾರಣ ಅದು ಮೆರವಣಿಗೆಯಲ್ಲಿ ಭಾಗಿಯಾಗುವುದಿಲ್ಲ. ಇದರಿಂದ ಮೆರವಣಿಗೆಯನ್ನು ಹೇಗೆ ನಡೆಸಬೇಕೆಂದು ಪಾಲಿಕೆ ಅಧಿಕಾರಿಗಳು ಹಾಗೂ ಅರಣ್ಯಾಧಿಕಾರಿಗಳ ಜತೆ ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದರು.
ಸಾಗರ ಆನೆಗೆ ಎರಡು ಹೆಣ್ಣಾನೆಗಳು ಬೇಕು. ಈಗ ನೇತ್ರಾವತಿ ಮೆರವಣಿಗೆಯಲ್ಲಿ ಭಾಗಿಯಾಗಲ್ಲ. ಇನ್ನೂ ಹೇಮಾವತಿ ಆನೆಯು ಸಹ ಅದರ ಆರೈಕೆಗೆ ಹೋಗಬೇಕಿದೆ. ಬಿಡಾರದಲ್ಲಿ ಭಾನುಮತಿ ಗರ್ಭಿಣಿಯಾಗಿದೆ. ನಾಳೆ ನಾಡಿದ್ದು ಮರಿ ಹಾಕುವ ಸ್ಥಿತಿಯಲ್ಲಿದೆ. ಕುಂತಿ ಆನೆಯು ಬಿಡಾರದಲ್ಲಿದ್ದು, ಅದು ಭಾನುಮತಿಯ ಆರೈಕೆಯಲ್ಲಿದೆ. ಇದರಿಂದ ಸಾಗರ ಆನೆಯು ಏಕಾಂಗಿಯಾಗಿ ಮೆರವಣಿಗೆಯಲ್ಲಿ ಹೋಗುವ ಕುರಿತು ಸಭೆ ನಡೆಸಿ ತೀರ್ಮಾನ ಮಾಡಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ನಾಳೆ ಶಿವಮೊಗ್ಗದಲ್ಲಿ ವಿಜಯದಶಮಿ ಮೆರವಣಿಗೆ: ಅಂಬಾರಿ ಹೊರುವ ಸಾಗರ ಆನೆಗೆ ಅಂತಿಮ ಹಂತದ ತಾಲೀಮು