ಶಿವಮೊಗ್ಗ: ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಯಿಂದಾಗಿ ಇಂದು ಏನಾದರೂ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆದರೆ, ಬಿಜೆಪಿ 130-135 ಸ್ಥಾನ ಗೆಲ್ಲಲಿದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಶಿವಮೊಗ್ಗ ಜಿಲ್ಲೆಗೆ ಆಗಮಿಸಿದ ಹಿನ್ನಲೆಯಲ್ಲಿ ಪ್ರೇರಣಾ ಸಭಾಂಗಣದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಈ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ನಂತರ ಕಾರ್ಯಕರ್ತರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ. ಮತ್ತೊಂದೆಡೆ ರಾಜ್ಯ ಸರ್ಕಾರ ಜನರ ವಿಶ್ವಾಸ ಕಳೆದು ಕೊಂಡಿದೆ. ಜನರ ಹಿತವನ್ನು ಮರೆತಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಇಂದು ವಿಧಾನಸಭೆ ಚುನಾವಣೆ ನಡೆದರೆ, 130-135 ಸ್ಥಾನಗಳಲ್ಲಿ ಪಕ್ಷ ಆರಿಸಿ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಜಯೇಂದ್ರ ರಾಜ್ಯಾಧ್ಯಕ್ಷರಾದ ನಂತರ ರಾಜ್ಯದಲ್ಲಿ ಬಿಜೆಪಿಗೆ ಉತ್ತಮವಾದ ವಾತಾವರಣ ಸೃಷ್ಟಿಯಾಗಿದೆ. ನಡ್ಡಾ ಅವರು ನನಗೆ ಫೋನ್ ಮಾಡಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಹೇಳಿದಾಗ ನಮಗೆ ನಂಬಲು ಆಗಲಿಲ್ಲ. ಆದರೆ ವಿಜಯೇಂದ್ರ ಬಂದು ಹೇಳಿದಾಗ ನನಗೆ ಗೊತ್ತಾಯಿತು. ಹಿಂದಿನ ಚುನಾವಣೆಯಲ್ಲಿ ಆದ ಹಿನ್ನಡೆ ಕುರಿತು ನಾನು ಈಗ ಮಾತನಾಡಲ್ಲ. ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆದ್ದು ಬಿಜೆಪಿ ಶಕ್ತಿ ಏನು ಎಂದು ತೋರಿಸೋಣ ಎಂದರು.
ಇದೇ ವೇಳೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ವಿಜಯೇಂದ್ರ ಆಗಮಿಸಿದ ವೇಳೆ ಬಿಜೆಪಿ ಕಾರ್ಯಕರ್ತರ ಸಂಭ್ರಮ ನೋಡಿದ ಕಾಂಗ್ರೆಸ್ ಎದೆ ಒಡೆದು ಹೋಗುತ್ತಿದೆ. ರಾಜ್ಯದ 1 ಕೋಟಿ ಕಾರ್ಯಕರ್ತರು ವಿಜಯೇಂದ್ರ ಅವರ ಜೊತೆ ಇದ್ದಾರೆ ಎಂದು ಹೇಳಿದರು.
ಡಿ.ಕೆ.ಶಿವಕುಮಾರ್ ಕೇಸ್ ವಾಪಸ್ ಪಡೆಯುವ ಸಂಪುಟ ತೀರ್ಮಾನ ಕಾನೂನು ಬಾಹಿರ : ಬಿ.ವೈ.ವಿಜಯೇಂದ್ರ
ಡಿ.ಕೆ.ಶಿವಕುಮಾರ್ ಅವರ ಸಿಬಿಐ ಪ್ರಕರಣವನ್ನು ಸಂಪುಟದಲ್ಲಿ ತೀರ್ಮಾನ ಮಾಡಿ ವಾಪಸ್ ಪಡೆದಿರುವುದು ಕಾನೂನು ಬಾಹಿರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಮಾಧ್ಯಮದವರ ಜೊತೆ ಮಾತನಾಡಿದ ಅವರು, ಇಡಿ ಪತ್ರ ಬರೆದಾಗ ಸಿಬಿಐ ತನಿಖೆಗೆ ಬಿ.ಎಸ್.ಯಡಿಯೂರಪ್ಪ ಸರ್ಕಾರ ಅನುಮತಿ ಕೊಟ್ಟಿತ್ತು. ಆದರೆ ಈಗ ಸರ್ಕಾರ ವಾಪಸ್ ಪಡೆದಿದೆ, ಇದಕ್ಕೆ ನ್ಯಾಯಾಲಯದಲ್ಲಿ ಜಯ ಸಿಗಲ್ಲ. ಏನೇ ಪ್ರಯತ್ನ ಮಾಡಿದರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಾನು ಡಿ.ಕೆ.ಶಿವಕುಮಾರ್ ಅವರನ್ನು ಅಪರಾಧಿ ಎನ್ನುತ್ತಿಲ್ಲ. ತಪ್ಪು ಮಾಡಿಲ್ಲ ಎಂದರೇ ನ್ಯಾಯಾಲಯದಲ್ಲಿ ಹೋರಾಟ ಮಾಡಲಿ ಎಂದರು.
ನಾನೇನು ಡಿ.ಕೆ.ಶಿವಕುಮಾರ್ ವಿರೋಧಿ ಅಲ್ಲ: ಯಡಿಯೂರಪ್ಪ- ಡಿ.ಕೆ.ಶಿವಕುಮಾರ್ ಅವರ ವಿಚಾರದಲ್ಲಿ ಕೋರ್ಟ್ ತೀರ್ಮಾನದ ಬಗ್ಗೆ ನಾನೇನು ಹೇಳಲ್ಲ. ನಾವೇನು ಡಿ.ಕೆ.ಶಿವಕುಮಾರ್ ವಿರೋಧಿಗಳಲ್ಲ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ. ಕೋರ್ಟ್ ಏನ್ ತೀರ್ಮಾನ ಮಾಡುತ್ತದೆಯೋ ಅದರ ಬಗ್ಗೆ ನಾನು ಮಾತನಾಡಲ್ಲ ಎಂದು ಇದೇ ವೇಳೆ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಕನಕದಾಸರು ಸಮಾಜದ ಅಸಮಾನತೆ ತೊಲಗಿಸಲು ಬಯಸಿದ್ದರು: ಸಿಎಂ ಸಿದ್ದರಾಮಯ್ಯ