ಶಿವಮೊಗ್ಗ: ನಮ್ಮ ದೈನಂದಿನ ವಹಿವಾಟಿನ ಜೀವನದಲ್ಲಿ ಎಟಿಎಂ ಒಂದು ಭಾಗವಾಗಿ ಮಾರ್ಪಟ್ಟಿವೆ. ಗ್ರಾಹಕರು ತಮ್ಮ ಹಣ ಹಿಂತೆಗೆದುಕೊಳ್ಳಲು ಬ್ಯಾಂಕ್ ಶಾಖೆಗಳಿಗೆ ತೆರಳದೇ ಎಟಿಎಂಗಳ ಮೊರೆ ಹೋಗುತ್ತಾರೆ. ಇವು ಬ್ಯಾಂಕ್ಗಳಲ್ಲಿ ದಟ್ಟಣಿ ತಗ್ಗಿಸಲು ನೆರವಾಗಿವೆ.
ಎಟಿಎಂ ಸ್ಥಾಪನೆಯಿಂದಾಗಿ ಗ್ರಾಹಕರು ಹಣ ಚಲಾಯಿಸುವುದನ್ನು ಹೆಚ್ಚಿಸಿಕೊಂಡಿದ್ದು, ಇದರಿಂದ ಹಣದ ಹರಿವು ಹೆಚ್ಚಾಗಿದೆ. ಮೊದಲೆಲ್ಲ ಬ್ಯಾಂಕ್ನಲ್ಲಿ ಸರತಿ ಸಾಲಿನಲ್ಲಿ ನಿಂತು ಹಣ ಪಡೆಯಬಹುದಾಗಿತ್ತು. ಈಗ ಬ್ಯಾಂಕ್ನಲ್ಲಿ ಸಾಲು ಕಡಿಮೆಯಾಗಿ ಎಟಿಎಂಗಳಲ್ಲಿ ಸಾಲು ಹೆಚ್ಚಾಗುವಂತೆ ಆಗಿದೆ. ಎಟಿಎಂಗಳು ಮೊದಲು ಗ್ರಾಹಕರ ಬಳಕೆಗೆ ಕಷ್ಟ ಎಂಬಂತೆ ಆಗಿದ್ರೂ ಇದೀಗ ಸರಳವಾಗಿ ಎಲ್ಲರು ಉಪಯೋಗಿಸುವಂತಾಗಿದೆ.
ಮೊಬೈಲ್ ಬ್ಯಾಂಕಿಂಗ್, ಆನ್‌ಲೈನ್ ಬ್ಯಾಂಕಿಂಗ್‌ನಂತಹ ತಂತ್ರಜ್ಞಾನ ಆಧಾರಿತ ವ್ಯವಸ್ಥೆ ಇತ್ತೀಚೆಗೆ ಜನಪ್ರಿಯವಾಗುತ್ತಿದ್ದರೂ, ಎಟಿಎಂಗಳ ಸಂಖ್ಯೆ ಇನ್ನೂ ಹೆಚ್ಚಲಿದೆ ಎಂದು ಹೇಳಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಬ್ಯಾಂಕಿಂಗ್ ಜನಪ್ರಿಯತೆ ಗಳಿಸಿದ್ದರೂ, ನಗದು ಜನರ ನಿತ್ಯದ ವಹಿವಾಟಿನ ಪ್ರಮುಖ ಭಾಗವಾಗಿಯೇ ಮುಂದುವರೆದಿದೆ, ಎಂದರೆ ತಪ್ಪಾಗಲ್ಲ. ಇನ್ನು ಶಿವಮೊಗ್ಗ ಜಿಲ್ಲೆಯಲ್ಲಿ 393 ಎಟಿಎಂ ಮಷಿನ್ಗಳಿದ್ದು, ಎಟಿಎಂ ಬಳಕೆದಾರರ ಸುರಕ್ಷತೆಯ ದೃಷ್ಟಿಯಿಂದ ಸಿ.ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಇನ್ನು ಎಲ್ಲ ಕ್ಷೇತ್ರಗಳಲ್ಲಿಯೂ ಇಂದು ಭದ್ರತೆ ಎಂಬುವುದು ಅಗತ್ಯ. ಅದರಲ್ಲೂ ಬ್ಯಾಂಕಿಂಗ್ ವ್ಯವಹಾರ ನಡೆಸುವ ಎಟಿಎಂಗಳಲ್ಲಿ ಇದರ ಪ್ರಾಮುಖ್ಯತೆ ಹೆಚ್ಚು ಪಡೆದಿದೆ. ಆದರೆ ಇತ್ತೀಚೆಗೆ ಇಲ್ಲಿ ನಡೆಯುತ್ತಿರುವ ಭದ್ರತಾ ಲೋಪ ಇಡೀ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ಪ್ರಶ್ನಿಸುವಂತಾಗಿದ್ದು, ಹೆಚ್ಚಿನ ಎಟಿಎಂಗಳಲ್ಲಿ ಭದ್ರತಾ ಸಿಬಂದಿಯೇ ಇಲ್ಲದಂತಾಗಿದೆ. ಎಟಿಎಂಗಳಲ್ಲಿ ಹಣ ವಿತ್ ಡ್ರಾ ಮಾಡಿದ ಕೂಡಲೇ ಕಳ್ಳರ ಹಣವನ್ನು ಎಗರಿಸುವ ಪ್ರಕರಣಗಳು ಹೆಚ್ಚಾಗುತ್ತಿವೆ.
ನಂತರ ನೋಟು ಅಮಾನ್ಯೀಕರಣ ನಂತರ ಜನ ಕೈಯಲ್ಲಿ ಹೆಚ್ಚು ಹಣ ಇಟ್ಟುಕೊಳ್ಳದೇ ಬ್ಯಾಂಕಿನಲ್ಲಿಟ್ಟು ಅಗತ್ಯವಿದ್ದಾಗ ಡ್ರಾ ಮಾಡಿಕೊಳ್ಳುವ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ. ಯಾವಾಗ ಬೇಕಾದರೂ ಎಟಿಎಂಗಳಲ್ಲಿ ಹಣ ತೆಗೆಯಬಹುದಲ್ಲ ಎಂಬ ಭಾವನೆ ಜನರಲ್ಲಿದೆ. ಹೀಗಿರುವ ಎಟಿಎಂ ಭದ್ರತೆ ಅತಿ ಮುಖ್ಯವಾಗಿದೆ.