ಶಿವಮೊಗ್ಗ: ಆಗುಂಬೆ ಘಾಟಿಯಲ್ಲಿ ಗುಡ್ಡ(ಮಣ್ಣು) ಕುಸಿತವಾಗಿರುವುದರಿಂದ ಕರಾವಳಿಗೆ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ತಿಳಿಸಿದ್ದಾರೆ. ಕುಸಿತವಾಗಿರುವ ಮಣ್ಣು ಮತ್ತು ಮರಮುಟ್ಟುಗಳನ್ನು ತೆರವುಗೊಳಿಸುವ ಕಾರ್ಯ ಚುರುಕುಗೊಂಡಿದೆ.
ಈ ಹಿನ್ನೆಲೆಯಲ್ಲಿ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಜುಲೈ 12ರ ಮುಂಜಾನೆ 8 ಗಂಟೆಯವರೆಗೂ ನಿರ್ಬಂಧಿಸಲಾಗಿದೆ. ನಂತರ ಜುಲೈ 30ರ ವರೆಗೆ ಈ ಮಾರ್ಗದಲ್ಲಿ ಲಘು ವಾಹನ ಸಂಚಾರಕ್ಕೆ ಮಾತ್ರ ಅನುವು ಮಾಡಿಕೊಡಲಾಗುತ್ತದೆ.
ಬದಲಿ ಮಾರ್ಗ: ಶಿವಮೊಗ್ಗದಿಂದ ಉಡುಪಿ-ಮಂಗಳೂರಿಗೆ ಹೋಗುವ ಪ್ರಯಾಣಿಕರು ತೀರ್ಥಹಳ್ಳಿ-ಕೊಪ್ಪ-ಶೃಂಗೇರಿ- ಕಾರ್ಕಳ-ಮಂಗಳೂರು ತಲುಪಬಹುದು ಹಾಗೂ ತೀರ್ಥಹಳ್ಳಿ-ಮಾಸ್ತಿಕಟ್ಟೆ-ಕುಂದಾಪುರ ಮಾರ್ಗವನ್ನು ಬಳಸುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ.
ರೈಸ್ ಮಿಲ್ನ ಮೇಲ್ಛಾವಣಿ ಕುಸಿತ: ಭಾರಿ ಮಳೆ ಹಿನ್ನೆಲೆ ಕಾರ್ಗಲ್ನ ಬೃಂದಾವನ ಡ್ರೈಯರ್ ರೈಸ್ ಮಿಲ್ನ ಮೇಲ್ಛಾವಣಿ ಕುಸಿದು ಬಿದ್ದು ಸಾವಿರಾರು ಭತ್ತದ ಚೀಲ ಹಾಳಾಗಿದೆ. ಸುಮಾರು 80 ಅಡಿ ಎತ್ತರದ ಗೋಡೆ ಜೊತೆಗೆ ಮೇಲ್ಛಾವಣಿ ಸಹ ಕುಸಿದು ಬಿದ್ದಿದೆ. ರೈಸ್ ಮಿಲ್ನ ಯಂತ್ರೋಪಕರಣಗಳು, ಡ್ರೈಯರ್ ಮಷಿನ್, ಎರಡು ಜನರೇಟರ್ಗಳು ಹಾನಿಗೊಳಗಾಗಿದೆ. ಪರಿಣಾಮ ಸುಮಾರು ಒಂದು ಕೋಟಿಗೂ ಅಧಿಕ ನಷ್ಟ ಉಂಟಾಗಿದೆ.
ಇದನ್ನೂ ಓದಿ: ಆಗುಂಬೆ ಘಾಟಿಯಲ್ಲಿ ಗುಡ್ಡ ಕುಸಿತ.. ಗೃಹ ಸಚಿವರ ಭೇಟಿ-ತುರ್ತು ಕಾರ್ಯಕ್ಕೆ ಸೂಚನೆ
ಅದೃಷ್ಟವಶಾತ್ ಕಾರ್ಮಿರು ಕೆಲಸ ಮಾಡುವ ಸ್ಥಳದಲ್ಲಿ ಯಾವುದೇ ಹಾನಿಯಾಗಿಲ್ಲ. ಒಂದು ವೇಳೆ ಹಾಗಾಗಿದ್ರೆ ಅನೇಕರ ಪ್ರಾಣಕ್ಕೆ ಕುತ್ತು ಬರುತ್ತಿತ್ತು ಎಂದು ರೈಸ್ ಮಿಲ್ ಮಾಲೀಕ ವಿನೋದ್ ಮಹಲೆ ತಿಳಿಸಿದ್ದಾರೆ. ಈ ಕುರಿತು ಕಾರ್ಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.