ಶಿವಮೊಗ್ಗ: ಕೊರೊನಾ ಮಹಾಮಾರಿಗೆ ಪ್ರಪಂಚವೇ ಔಷಧ ಕಂಡು ಹಿಡಿಯಲು ಹಗಲಿರುಳು ಪ್ರಯತ್ನಿಸುತ್ತಿದೆ. ಆದರೆ ಶಿವಮೊಗ್ಗದ ಯುವಕರ ತಂಡವೊಂದು ನ್ಯಾನೋ ತಂತ್ರಜ್ಞಾನ ಬಳಸಿ ಕೊರೊನಾ ವೈರಸ್ ಕೊಲ್ಲುವ ಪ್ಲಾಸ್ಟಿಕ್ ಶೀಟ್ಅನ್ನು ಆವಿಷ್ಕರಿಸಿದೆ.
ನ್ಯಾನೋ ಟೆಕ್ನಾಲಜಿಯ ಪ್ಲಾಸ್ಟಿಕ್ ಶೀಟ್ ಮೇಲೆ ಕೊರೊನಾ ವೈರಸ್ ಬಿದ್ದರೆ 2 ಗಂಟೆ 54 ನಿಮಿಷಕ್ಕೆ ಅದು ನಾಶವಾಗುತ್ತದೆ. ಕೊರೊನಾ ವೈರಸ್ ಇಲ್ಲಿಂದ ಬೇರೆ ಕಡೆ ವರ್ಗಾವಣೆ ಆಗುವುದಿಲ್ಲ. ಇಂತಹ ಪ್ಲಾಸ್ಟಿಕ್ ಶೀಟ್ ಅನ್ನು ಆಸ್ಪತ್ರೆ, ಮನೆ ಸೇರಿದಂತೆ ಎಲ್ಲಾ ಕಡೆ ಬಳಸಬಹುದಾಗಿದೆ ಎಂದು ಸಂಶೋಧಕ ಯುವಕರ ತಂಡ ತಿಳಿಸಿದೆ.
ಶಿವಮೊಗ್ಗದ ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದ ಬಾಲಾಜಿ ಪಾಲಿಪ್ಯಾಕ್ ಮತ್ತು ಆ್ಯಡ್ ನ್ಯಾನೋ ಟೆಕ್ನಾಲಜಿ ಪ್ರೈ.ಲಿಮಿಟೆಡ್ನವರು ಜಂಟಿಯಾಗಿ ಈ ನ್ಯಾನೋ ಟೆಕ್ನಾಲಜಿ ಕೋವಿಡ್ ಗಾರ್ಡ್ ಪ್ಲಾಸ್ಟಿಕ್ ಶೀಟ್ ತಯಾರಿಸುತ್ತಿದ್ದಾರೆ. ಈ ಪ್ಲಾಸ್ಟಿಕ್ ಶೀಟ್ 70 ಮೈಕ್ರಾನ್ಗಿಂತ ಕೊಂಚ ದಪ್ಪವಾಗಿದೆ. ಇದರಿಂದ ಪಿಪಿಇ ಕಿಟ್, ಬೆಡ್ ಕವರ್, ತಲೆದಿಂಬು ಕವರ್ ಹಾಗೂ ಕರ್ಟನ್ ಸೇರಿದಂತೆ ನೆಲದ ಹಾಸನ್ನು ಸಹ ಮಾಡಬಹುದು.
ಪ್ಲಾಸ್ಟಿಕ್ ಶೀಟ್ ಅನ್ನು ಮಾಚೇನಹಳ್ಳಿಯ ಬಾಲಾಜಿ ಪಾಲಿಪ್ಯಾಕ್ ಕಾರ್ಖಾನೆಯಲ್ಲಿ ತಯಾರಿಸಲಾಗಿದೆ. ಇದರ ಮಾಲೀಕ ವಿನಯ್ ಅವರು ಆ್ಯಡ್ ನ್ಯಾನೋ ಟೆಕ್ನಾಲಜಿ ಪಾಲುದಾರರಾದ ಮಹ್ಮದ್ ಆಡ್ನಾನ್ ಜಾವೀದ್, ಆಶಿಸ್ ಆ್ಯಂಡರ್ಸನ್ ಹಾಗೂ ಡಾ.ಅರುಣ್ ಅವರ ಜತೆ ಚರ್ಚೆ ನಡೆಸಿ, ಕೊರೊನಾ ವೈರಸ್ ಹರಡದಂತೆ ಈ ಹೊಸ ಆವಿಷ್ಕಾರ ಮಾಡಿದ್ದಾರೆ.
ಲಾಕ್ಡೌನ್ ಅವಧಿಯಲ್ಲಿ ಯುವಕರ ತಂಡ ಸಂಶೋಧನೆ ನಡೆಸಿದೆ. ಇದಕ್ಕಾಗಿ ಯುವಕರ ತಂಡ ಸಾಕಷ್ಟು ಪ್ರಯತ್ನ ನಡೆಸಿದೆ. ಕೊರೊನಾ ವೈರಸ್ಗಳು ಪ್ಲಾಸ್ಟಿಕ್, ಸ್ಟೈನ್ ಲೆಸ್ ಸ್ಟೀಲ್ ವಸ್ತುಗಳ ಮೇಲೆ 2 ರಿಂದ 3 ದಿನ, ಗ್ಲಾಸ್ ಹಾಗೂ ಮರದ ವಸ್ತುಗಳ ಮೇಲೆ 4 ದಿನ, ಮೆಟಲ್ ಮೇಲೆ 5 ದಿನಗಳ ಕಾಲ ಬದುಕಿರುತ್ತದೆ. ಆದರೆ ಯುವಕರು ಸಂಶೋಧನೆ ಮಾಡಿದ ಈ ಪ್ಲಾಸ್ಟಿಕ್ ಶೀಟ್ನ ಮೇಲೆ ವೈರಸ್ ಕೇವಲ 2 ಗಂಟೆ 54 ನಿಮಿಷ ಮಾತ್ರ ಜೀವಂತವಿರುತ್ತದೆ.
ನ್ಯಾನೋ ಪಾರ್ಟಿಕಲ್, ಕೊರೊನಾ ವೈರಸ್ಕ್ಕಿಂತ ಚಿಕ್ಕದಾಗಿರುತ್ತದೆ. ಇದು ಕೊರೊನಾ ವೈರಸ್ ಮೇಲೆ ಇರುವ ಪ್ರೋಟಿನ್ನನ್ನು ಕೊಲ್ಲುತ್ತದೆ. ಇದು ಪ್ರೋಟಿನ್ ಕರಗಿದ ಮೇಲೆ ಕೊರೊನಾ ವೈರಸ್ ನಾಶವಾಗುತ್ತದೆ. ಐಸಿಎಂಆರ್ ಸಂಸ್ಥೆಯು ಟಿಇಟಿಎಸ್ಸಿ ಸಂಸ್ಥೆಗೆ ಪರೀಕ್ಷೆ ನಡೆಸಲು ಕಳುಹಿಸಿಕೊಡುವಂತೆ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕಳುಹಿಸಲಾಗಿದೆ. ಇನ್ನು ಈ ಸಂಶೋಧನೆಗೆ ಅನುಮತಿ ನೀಡಿದ್ದ ಐಸಿಎಂಆರ್ ಇದೀಗ ಈ ವಸ್ತುವನ್ನು ಮಾರಯಕಟ್ಟೆಗೆ ಬಿಡುಗಡೆ ಮಾಡಲು ಅನುಮತಿಯನ್ನೂ ನೀಡಿದೆ.
ಮುಂದಿನ ತಿಂಗಳು ಪ್ರಾಡಕ್ಟ್ಗಳನ್ನು ಮಾರುಕಟ್ಟೆಗೆ ತರುವ ಆಲೋಚನೆ ಈ ತಂಡದ್ದಾಗಿದೆ. ಯುವಕರ ತಂಡ 10 ಸ್ಯಾಂಪಲ್ಸ್ ಅನ್ನು ಪರೀಕ್ಷೆಗೆ ಕಳುಹಿಸಿ ಕೊಟ್ಟಿತ್ತು. ಇದರಲ್ಲಿ ಏಳನೇ ಸ್ಯಾಂಪಲ್ ಶೀಟ್ ಉತ್ಪಾದನೆಗೆ ಉತ್ತಮ ಎಂದು ತಿಳಿದು ಶೀಟ್ ತಯಾರಿಸಿದ್ದೇವೆ ಎನ್ನುತ್ತಾರೆ ವಿನಯ್ ಹಾಗೂ ಆಶೀಸ್ ಆ್ಯಂಡರ್ಸನ್.