ಶಿವಮೊಗ್ಗ: ಮಲೆನಾಡನಲ್ಲಿ ಜೀವನಾಡಿಯಾಗಿ ಹರಿಯುವ ಭದ್ರಾ ಜಲಾಶಯ 186 ಅಡಿ ಗರಿಷ್ಠ ಮಟ್ಟವನ್ನು ಹೊಂದಿದ್ದು. ಇಂದು ಜಲಾಶಯದಲ್ಲಿ 184.4 ಅಡಿ ನೀರು ಸಂಗ್ರಹವಾಗಿದೆ. ಆದರೆ ಜಲಾಶಯಕ್ಕೆ 15 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನದಿಗೆ 5 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
ಜಲಾಶಯದಲ್ಲಿ ಇಂಜಿನಿಯರ್ಗಳ ಪೂಜೆ ಸಲ್ಲಿಸುವ ಮೂಲಕ ನಾಲ್ಕು ಕ್ರಸ್ಟ್ ಗೇಟ್ಗಳ ಮೂಲಕ ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ. ಜಲಾಶಯದ ಹಿನ್ನೀರಿನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ಬರುತ್ತಿದೆ. ಇದರಿಂದ ಜಲಾಶಯದ ಹಿತದೃಷ್ಟಿಯಿಂದ ನದಿಗೆ ನೀರು ಬಿಡುಗಡೆ ಮಾಡಲಾಗಿದೆ.
ವಿಶ್ವೇಶ್ವರಯ್ಯರಿಂದ ನಿರ್ಮಿಸಲ್ಪಟ್ಟ ಜಲಾಶಯ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಹುಟ್ಟುವ ಭದ್ರಾನದಿಗೆ ಶಿವಮೊಗ್ಗ- ಚಿಕ್ಕಮಗಳೂರು ಜಿಲ್ಲೆಯ ಗಡಿ ಭಾಗದಲ್ಲಿ ಅಣೆಕಟ್ಟನ್ನು ನಿರ್ಮಿಸಲಾಗಿದೆ. ಪ್ರಪಂಚ ಕಂಡ ಅದ್ಭುತ ಇಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರಿಂದ ನಿರ್ಮಿಸಲ್ಪಟ್ಟ ಜಲಾಶಯ ಇದಾಗಿದೆ. ಈ ಜಲಾಶಯದ ನಿರ್ಮಾಣ 1947 ರಿಂದ ಪ್ರಾರಂಭವಾಗಿ 1965 ರಲ್ಲಿ ಮುಕ್ತಾಯವಾಗಿತ್ತು. ಈ ಜಲಾಶಯವು 71.50 ಟಿಎಂಸಿ ನೀರು ಸಂಗ್ರಹ ಸಾರ್ಮಥ್ಯ ಹೊಂದಿದೆ.
ವಿವಿಧ ಜಿಲ್ಲೆಗಳ ಜೀವನಾಡಿ:
ಡೆಡ್ ಸ್ಟೋರೇಜ್ 8.50 ಟಿಎಂಸಿ ಹಾಗೂ ಬಳಕೆಗೆ 63 ಟಿಎಂಸಿ ನೀರು ಬಳಕೆಗೆ ಯೋಗ್ಯವಾಗಿದೆ. ಜಲಾಶಯದಿಂದ ಎಡ ಹಾಗೂ ಬಲದಂಡೆ ಕಾಲುವೆಯ ಮೂಲಕ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಜಿಲ್ಲೆಗೆ ನೀರು ಹರಿಸಲಾಗುತ್ತದೆ. ಈಗ ಹೊಸದಾಗಿ ಭದ್ರಾ ಮೇಲ್ದಂಡೆ ಯೋಜನೆ ಜಾರಿ ಮಾಡಲಾಗಿದ್ದು, ಇಲ್ಲಿಂದ ಚಿತ್ರದುರ್ಗ, ತುಮಕೂರು ಜಿಲ್ಲೆಗಳಿಗೆ ನೀರು ನೀಡಲಾಗುತ್ತಿದೆ.
ಮಲೆನಾಡನಲ್ಲಿ ಹುಟ್ಟಿ ಬಂಗಾಳಕೊಲ್ಲಿ ಸೇರುವ ನದಿ ಭದ್ರಾ:
ಭದ್ರಾ ನದಿಯು ಮುಂದೆ ಶಿವಮೊಗ್ಗ ತಾಲೂಕಿನ ಕೂಡ್ಲಿಯಲ್ಲಿ ತುಂಗಾ ನದಿಯನ್ನು ಸೇರಿ ತುಂಗಭದ್ರಾವಾಗಿ ಹರಿಯುತ್ತದೆ. ಈ ನದಿಗೆ ಹೊಸಪೇಟೆ ಬಳಿ ಅಣೆಕಟ್ಟು ನಿರ್ಮಿಸಲಾಗಿದೆ. ಇಲ್ಲಿಂದ ನದಿಯು ಕೃಷ್ಣ ನದಿಗೆ ಸೇರಿಕೊಂಡು ಆಂಧ್ರ ಪ್ರದೇಶದ ಮೂಲಕ ಬಂಗಾಳಕೊಲ್ಲಿಯನ್ನು ಸೇರುತ್ತದೆ. ಮಲೆನಾಡಿನಲ್ಲಿ ಹುಟ್ಟಿ ಬಂಗಾಳಕೊಲ್ಲಿಗೆ ಸೇರುವ ಏಕೈಕ ನದಿ ಇದಾಗಿದೆ.
ಕೃಷಿಗೆ ಸಹಕಾರಿ:
ಈ ಜಲಾಶಯದಿಂದ ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ, ಹಾವೇರಿ, ಗದಗದ, ಬಳ್ಳಾರಿ,ಕೊಪ್ಪಳ,ತುಮಕೂರು ಜಿಲ್ಲೆಗಳಿಗೆ ನೀರು ಹರಿಸಲಾಗುತ್ತಿದೆ. ನದಿ ಹರಿಯುವ ಉದ್ದಕ್ಕೂ ಕುಡಿಯುವ ನೀರಾಗಿ ಹಾಗೂ ಕೃಷಿಗೆ ಸಹಕಾರಿಯಾಗಿ ಸಾಗುತ್ತದೆ.
ಪ್ರವಾಸಿಗರಿಗೆ ಹಬ್ಬ:
ಜಲಾಶಯದಿಂದ ನೀರು ಬಿಡುವುದನ್ನು ನೋಡಲು ಪ್ರವಾಸಿಗರು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಜಲಾಶಯದ ಮುಂಭಾಗ ಪ್ರವಾಸಿಗರು ಸೆಲ್ಫಿ ತೆಗೆದುಕೊಂಡು ಸಂತೋಷಗೊಂಡರು.