ಶಿವಮೊಗ್ಗ: ಹುಣಸೋಡು ಕಲ್ಲು ಕ್ವಾರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತಪಟ್ಟ ಕಾರ್ಮಿಕರ ಕುಟುಂಬಗಳಿಗೆ ತಲಾ 20 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ಸ್ಟೇಟ್ ಕನ್ಸ್ಟ್ರಕ್ಷನ್ ವರ್ಕರ್ಸ್ ಸೆಂಟ್ರಲ್ ಯೂನಿಯನ್ ಸಂಘಟನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು.
ಕಾರ್ಮಿಕರ ಕುಟುಂಬಗಳಿಗೆ ಸರ್ಕಾರ 5 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದೆ. ಆದರೆ ಈ ಪರಿಹಾರ ಹಣದಿಂದ ಸಾವನ್ನಪ್ಪಿದ ಕುಟುಂಬಗಳಿಗೆ ಯಾವುದೇ ಸಹಾಯ ಆಗುವುದಿಲ್ಲ. ಕಾರ್ಮಿಕ ಇಡೀ ಒಂದು ಕುಟುಂಬದ ಆಧಾರಸ್ತಂಭ ಆಗಿರುತ್ತಾನೆ, ಅವನೇ ಸಾವನ್ನಪ್ಪಿದ ಮೇಲೆ ಮಕ್ಕಳ ವಿದ್ಯಾಭ್ಯಾಸ ಸೇರಿದಂತೆ ಕುಟುಂಬ ನಿರ್ವಹಣೆ ಸಂಕಷ್ಟಕ್ಕೆ ಸಿಲುಕುತ್ತದೆ. ಹಾಗಾಗಿ ಸರ್ಕಾರ ಕೂಡಲೇ ಸಾವನ್ನಪ್ಪಿದ 6 ಜನ ಕಾರ್ಮಿಕರಿಗೆ ತಲಾ 20 ಲಕ್ಷ ರೂ. ನೀಡಬೇಕು ಎಂದು ಆಗ್ರಹಿಸಿದರು.
ಸಿಬಿಐಗೆ ತನಿಖೆ ವರ್ಗಾಹಿಸುವಂತೆ ಮನವಿ
ಕಲ್ಲುಕ್ವಾರಿ ಸ್ಫೋಟದ ತನಿಖೆಯನ್ನು ಸಿಬಿಐಗೆ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಹುಣಸೋಡು ಸ್ಫೋಟವು ಇಡೀ ಜಿಲ್ಲೆಯ ಜನರನ್ನು ಆತಂಕಕ್ಕೀಡುಮಾಡಿದೆ. ಜಿಲ್ಲೆಯಲ್ಲಿ ಅನೇಕ ಜಲಾಶಯಗಳಿದ್ದು, ಇಂತಹ ಸ್ಫೋಟದಿಂದ ಜಲಾಶಯಗಳಿಗೆ ಹಾನಿಯಾಗುತ್ತದೆ. ಹಾಗಾಗಿ ಅಕ್ರಮ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಕಲ್ಲು ಗಣಿಗಾರಿಕೆ ತಡೆಗಟ್ಟುವಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿವೆ. ಇಷ್ಟೆಲ್ಲಾ ದೊಡ್ಡ ಮಟ್ಟದ ಸ್ಫೋಟಕವನ್ನು ತಂದರೂ ಸಹ ಎಲ್ಲಿಯೂ ತನಿಖೆ ಮಾಡದೇ ನಗರದ ಮೂಲಕ ಕಲ್ಲು ಕ್ವಾರಿಗೆ ತಲುಪಿದೆ, ಇದರ ಹಿಂದೆ ಅನೇಕ ಪ್ರಭಾವಿಗಳಿರುವ ಅನುಮಾನವಿದೆ. ಕೂಡಲೇ ಈ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಬೇಕು. ಇಲ್ಲವಾದರೆ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ರಾಜ್ಯದಾದ್ಯಂತ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಕಲ್ಲುಕ್ವಾರಿ ಸ್ಪೋಟಕ್ಕೆ ಶಾಸಕ ಅಶೋಕ್ ನಾಯ್ಕ ಅವರೇ ನೇರ ಕಾರಣ : ಕಾಂಗ್ರೆಸ್ ಆರೋಪ