ರಾಮನಗರ: ಗ್ರೀನ್ ಝೋನ್ನಲ್ಲಿದ್ದ ರಾಮನಗರಕ್ಕೂ ಕೊರೊನಾ ಎಂಟ್ರಿ ಕೊಟ್ಟಿದೆ. ಮಾಗಡಿ ತಾಲೂಕಿನಲ್ಲಿ ಎರಡು ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿವೆ.
ಜಿಲ್ಲೆಯ ಮಾಗಡಿ ತಾಲೂಕಿನ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಕೆಎಸ್ಆರ್ಟಿಸಿ ಡ್ರೈವರ್ ಹಾಗೂ ಮಗುವಿಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ತುಮಕೂರಿನ ಬೆಳ್ಳಾವಿ ಮೂಲದವರಾದ ಮಾಗಡಿ ಕೆಎಸ್ಆರ್ಟಿಸಿ ಡಿಪೋ ಕಂಡಕ್ಟರ್ಗೆ ಕೊರೊನಾ ದೃಢಪಟ್ಟಿದೆ.
ಐದು ದಿನಗಳ ಹಿಂದೆ ಲಾಕ್ಡೌನ್ ಸಡಿಲಿಕೆಯಾದ ಹಿನ್ನೆಲೆಯಲ್ಲಿ ಚಾಲಕ ಕರ್ತವ್ಯಕ್ಕೆ ಹಾಜರಾಗಿದ್ದ. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ತಪಾಸಣೆ ನಡೆಸಲಾಗಿತ್ತು. ಕೊರೊನಾ ವರದಿ ಬರುವ ಮುನ್ನವೇ ಡಿಪೋ ಮ್ಯಾನೇಜರ್ ಡ್ಯೂಟಿ ನೀಡಿದ್ದರು. ಮೂರು ದಿನಗಳಿಂದ ಮಾಗಡಿ ಬೆಂಗಳೂರು ಮಾರ್ಗದಲ್ಲಿಯೇ ಕರ್ತವ್ಯ ನಿರ್ವಹಿಸಿದ್ದರು ಎನ್ನಲಾಗಿದೆ.
ಮಾಗಡಿಯ ಕೆಎಸ್ಆರ್ಟಿಸಿ ಡಿಪೋದಲ್ಲಿ ತನ್ನ ಸಹ ಸಿಬ್ಬಂದಿ ಜೊತೆ ಸಹಪಂಕ್ತಿ ಊಟ ತಿಂಡಿ ಸೇವಿಸಿದ್ದ ಚಾಲಕನ ಫೋಟೋಗಳು ಇದೀಗ ವೈರಲ್ ಆಗಿವೆ. ಅಲ್ಲದೆ ಮಾಗಡಿ ಕೆಎಸ್ಆರ್ಟಿಸಿ ಡಿಪೋದಲ್ಲಿ ಆತಂಕ ಮನೆ ಮಾಡಿದೆ. ಕೊರೊನಾ ಸೋಂಕಿತ ಚಾಲಕ ಚಲಾಯಿಸುತ್ತಿದ್ದ ಬಸ್ನಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರ ಮೇಲೂ ನಿಗಾ ವಹಿಸಲು ತೀರ್ಮಾನಿಸಲಾಗಿದ್ದು, ಟ್ರಾವೆಲ್ ಹಿಸ್ಟರಿ ಪತ್ತೆ ಕಾರ್ಯ ಮುಂದುವರೆದಿದೆ.
ಮಾಗಡಿಯಲ್ಲಿ ಮಗುವಿಗೂ ಕೊರೊನಾ ದೃಢ:
ಕುದೂರು ಬಳಿಯ ಸಂಕಿ ಘಟ್ಟ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಗ್ರಾಮದಲ್ಲಿ ಎರಡೂವರೆ ವರ್ಷದ ಮಗುವಿನಲ್ಲೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆರೋಗ್ಯ ಇಲಾಖೆ ಸಿಬ್ಬಂದಿ ಮಗುವನ್ನು ವಶಕ್ಕೆ ಪಡೆದಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಮಗುವಿನ ನಿಕಟ ಸಂಪರ್ಕ ಹೊಂದಿದ್ದ ಕುಟುಂಬದವರ ಮೇಲೂ ತೀವ್ರ ನಿಗಾ ವಹಿಸಲಾಗಿದೆ.
ತಮಿಳುನಾಡಿನ ಚೆನ್ನೈನಿಂದ ಬಂದಿದ್ದ ಮಗುವಿನ ಕುಟುಂಬವನ್ನ ಕ್ವಾರಂಟೈನ್ ಮಾಡಲಾಗಿತ್ತು. ಮೊದಲ ಬಾರಿ ಟೆಸ್ಟ್ ಮಾಡಿದ್ದ ವೇಳೆ ನೆಗೆಟಿವ್ ಬಂದಿತ್ತು. ಎರಡನೇ ಬಾರಿ ಗಂಟಲು ದ್ರವ ಪರೀಕ್ಷೆಯಲ್ಲಿ ಕೊರೊನಾ ದೃಢಪಟ್ಟಿದೆ. ಈ ಹಿನ್ನೆಲೆ ಇಡೀ ಗ್ರಾಮವನ್ನೇ ಸೀಲ್ ಡೌನ್ ಮಾಡುವ ಸಾಧ್ಯತೆ ಇದೆ.