ಶಿವಮೊಗ್ಗ: ಜಿಲ್ಲೆಯಲ್ಲಿ ಹೆಚ್ಚಿದ ಮಳೆ ಕಾರಣದಿಂದಾಗಿ ಶುಂಠಿಗೆ ಶಿಲೀಂದ್ರ ಮತ್ತು ದುಂಡಾಣು ಗಡ್ಡೆ ಕೊಳೆ ರೋಗ ಕಂಡುಬರುವ ಸಾಧ್ಯತೆ ಇರುವುದರಿಂದ ರೈತರು ಅವುಗಳನ್ನು ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ನಿರ್ದೇಶಕರು ಸೂಚಿಸಿದ್ದಾರೆ.
ರೋಗಕ್ಕೆ ತುತ್ತಾದ ಗಿಡಗಳ ಎಲೆ ತುದಿ ಹಳದಿ ಬಣ್ಣಕ್ಕೆ ತಿರುಗಿ ಕ್ರಮೇಣ ಪೂರ್ತಿ ಎಲೆ ಹಳದಿಯಾಗುತ್ತದೆ. ನಂತರ ಗಿಡ ಒಣಗಿ ಬುಡದ ಭಾಗ ಕೊಳೆಯುತ್ತದೆ. ಈರೋಗಗಳನ್ನು ನಿಯಂತ್ರಿಸಲು ರೋಗಗ್ರಸ್ಥ ಗಡ್ಡೆಗಳನ್ನು ತೆಗೆದು ಹಾಕಿ, ನಂತರ 3 ಗ್ರಾಂ ಕಾಪರ್ ಆಕ್ಸಿಕ್ಲೋರೈಡ್, 50 ಡಬ್ಲ್ಯೂಪಿ ಮತ್ತು 0.5 ಗ್ರಾಂ ಸ್ಟ್ರಪ್ಟೊಸೈಕ್ಲೀನ್ ಅಥವಾ 2.5 ಗ್ರಾಂ ಮೆಟಾಲಾಕ್ಸಿಲ್ ಅಥವಾ ಬೋರ್ಡೋ ದ್ರಾವಣವನ್ನು ಪ್ರತಿ ಒಂದು ಲೀಟರ್ ನೀರಿನಲ್ಲಿ ಬೆರೆಸಿ ರೋಗ ಬಂದ ಗಿಡಕ್ಕೆ ಹಾಗೂ ಸುತ್ತಮುತ್ತ ಹಾಕಬೇಕು. ಎಲೆಚುಕ್ಕಿ ರೋಗಕ್ಕೂ ಸಹ ಮೇಲಿನ ಕ್ರಮಗಳನ್ನು ಅನುಸರಿಸಿ ನಿಯಂತ್ರಣಕ್ಕೆ ತರಬಹುದು ಎಂದಿದ್ದಾರೆ.
ಇದರ ಜೊತೆಗೆ ಕಾಂಡ ಕೊರೆಯುವ ಹುಳವಿನ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದ್ದು, ರೈತರು ಈ ಹುಳುವಿನ ಬಾಧೆ ಬಗ್ಗೆ ಜಾಗ್ರತೆ ವಹಿಸಬೇಕು. ಶುಂಠಿ ಗಿಡದ ಕಾಂಡದ ಮೇಲೆ ಅಡ್ಡದಾದ ರಂಧ್ರಗಳು ಕಂಡು ಬಂದು, ಗಿಡಗಳು ಒಣಗುತ್ತಿದ್ದಲ್ಲಿ ಅವುಗಳನ್ನು ಗುರುತಿಸಿ 1.7 ಮಿಲಿ ಡೈಮಿಥೋಯೇಟ್, 30 ಇಸಿ ಅಥವಾ 1 ಮಿಲಿ ಮೊನೋಕ್ರೋಟೋಫಾಸ್, 36 ಎಸ್ಎಲ್ ಅಥವಾ 2 ಮಿಲಿ ಮೆಲಾಥಿಯಾನ್, 50 ಇಸಿಯನ್ನು ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡಿಸುವುದರಿಂದ ಹತೋಟಿಗೆ ತರಬಹುದಾಗಿದೆ ಎಂದು ನಿರ್ದೇಶಕರು ಶುಂಠಿ ಬೆಳೆಗಾರರಿಗೆ ಸಲಹೆ ಸೂಚನೆ ನೀಡಿದ್ದಾರೆ.