ರಾಮನಗರ : ಲಾಕ್ಡೌನ್ ಹಿನ್ನೆಲೆ ಸರ್ಕಾರ ಉಚಿತ ಪಡಿತರ ವಿತರಣೆಗೆ ಆದೇಶಿಸಿದೆ. ಆದರೆ, ಆದೇಶ ಉಲ್ಲಂಘಿಸಿ ಪಡಿತರ ಕಾರ್ಡ್ದಾರರಿಂದ 10 ರೂ. ನಿಂದ 20 ರೂ. ಗಳನ್ನು ವಸೂಲಿ ಮಾಡುತ್ತಿರುವುದು ಹಾಗೂ ತೂಕದಲ್ಲಿ ವ್ಯತ್ಯಾಸ, ನಿಗದಿತ ಸಮಯದಲ್ಲಿ ಪಡಿತರ ವಿತರಣೆ ಮಾಡದಿರುವ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಜಿಲ್ಲೆಯ 4 ನ್ಯಾಯಬೆಲೆ ಅಂಗಡಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಅಮಾನತು ಪಡಿಸಿ ಆದೇಶ ಹೊರಡಿಸಿದ್ದಾರೆ.
![Suspension of 4 ration shops in Ramana district](https://etvbharatimages.akamaized.net/etvbharat/prod-images/kn-rmn-02-food-retion-stall-suspend-7204219_12042020232856_1204f_1586714336_817.jpg)
ಕನಕಪುರ ತಾಲೂಕಿನ ಕಸಬಾ ಹೋಬಳಿಯ ಶಿವನಹಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ನ್ಯಾಯಬೆಲೆ ಅಂಗಡಿ ಸಂಖ್ಯೆ-58, ಮಾಗಡಿ ತಾಲ್ಲೂಕಿನ ಮಾಡಬಾಳ್ ಹೋಬಳಿಯ ಮಂಚನಬೆಲೆ ಗ್ರಾಮದ ಟಿ.ಎ.ಪಿ.ಸಿ.ಎಂ.ಎಸ್ (ಪರ್ಯಾಯ ವ್ಯವಸ್ಥೆ) ಕಾರ್ಯದರ್ಶಿಗಳು ನ್ಯಾಯಬೆಲೆ ಅಂಗಡಿ ಸಂಖ್ಯೆ-41, ಚನ್ನಪಟ್ಟಣ ತಾಲೂಕಿನ ಕೋಡಂಬಳ್ಳಿ ಗ್ರಾಮದ ಭಾರತ್ ಮಾತಾ ಮಹಿಳಾ ಸಹಕಾರಿ ಸಂಘ ನ್ಯಾಯಬೆಲೆ ಅಂಗಡಿ ಸಂಖ್ಯೆ-71 ಹಾಗೂ ರಾಮನಗರದ ಕಸಬಾ ಹೋಬಳಿಯ ಬಿಳಗುಂಬ ಗ್ರಾಮದ ನ್ಯಾಯಬೆಲೆ ಅಂಗಡಿ ಮಾಲೀಕರು ಬಿ.ವಿ. ರಾಜೇಂದ್ರ ನ್ಯಾಯಬೆಲೆ ಅಂಗಡಿ ಸಂಖ್ಯೆ-17 ಯನ್ನು ಅಮಾನತುಗೊಳಿಸಿದ್ದಾರೆ.
ಕನಕಪುರ ತಾಲೂಕಿನ ಅಜೀಜ್‌ನಗರ, ಕನಕಪುರ ಟೌನ್‌ನ ಶಫೀ ಉಲ್ಲಾ ಎಂಬ ವ್ಯಕ್ತಿಯು ಅಕ್ರಮವಾಗಿ ಸಂಗ್ರಹಿಸಿದ ಅಂದಾಜು 50 ಕೆಜಿ ತೂಕದ ಅಕ್ಕಿ ತುಂಬಿದ ನಾಲ್ಕು ಪ್ಲಾಸ್ಟಿಕ್ ಚೀಲಗಳು, 50 ಕೆಜಿ ತೂಕದ 16 ಚೀಲ, ಅಕ್ಕಿ, ಹುರುಳಿ ತುಂಬಿದ 5 ಚೀಲಗಳು ಮತ್ತು 35 ಕೆಜಿ ತೂಕದ ಹೆಸರುಬೇಳೆ ಚೀಲದ ದಾಸ್ತಾನನ್ನು ವಶಪಡಿಸಿಕೊಂಡಿದ್ದಾರೆ.
ಸರ್ಕಾರ ಎರಡು ತಿಂಗಳ ಪಡಿತರವನ್ನು ಏಕ ಕಾಲದಲ್ಲಿ ಉಚಿತವಾಗಿ ವಿತರಣೆ ಮಾಡಲು ಸೂಚಿಸಿದ್ದು, ಇದನ್ನು ದುರುಪಯೋಗಪಡಿಸಿಕೊಂಡು ಕಾರ್ಡ್ದಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ತಪಾಸಣೆ ಮಾಡಿ ಕ್ರಮ ಕೈಗೊಳ್ಳಲಾಗಿದೆ.
ರಾಮನಗರ ಜಿಲ್ಲೆಯಲ್ಲಿ ಇನ್ನಿತರ ನ್ಯಾಯಬೆಲೆ ಅಂಗಡಿದಾರರು ಕಡಿಮೆ ಪ್ರಮಾಣದಲ್ಲಿ ವಿತರಿಸುವುದು, ಹಣ ಪಡೆಯುವುದು, ಸರಿಯಾದ ಸಮಯಕ್ಕೆ ನ್ಯಾಯಬಲೆ ಅಂಗಡಿ ಬಾಗಿಲು ತೆರೆಯದಿರುವುದು ಮುಂತಾದ ಲೋಪಗಳು ಕಂಡುಬಂದಲ್ಲಿ ಅಥವಾ ಪಡಿತರ ಚೀಟಿದಾರರಿಂದ ದೂರು ಸ್ವೀಕೃತವಾದಲ್ಲಿ ಅಂತಹ ನ್ಯಾಯಬೆಲೆ ಅಂಗಡಿಗಳ ವಿರುದ್ಧ ಕರ್ನಾಟಕ ಅಗತ್ಯ ವಸ್ತುಗಳ (ಸಾ.ವಿ.ಪ) ನಿಯಂತ್ರಣ ಆದೇಶ-2016 ರ ಅನ್ವಯ ಲೈಸೆನ್ಸ್ ರದ್ದುಪಡಿಸಲು ಸೂಕ್ತ ಕ್ರಮವಹಿಸಲಾಗುವುದು ಎಂದು ಜಿಲ್ಲೆಯ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಎಚ್ಚರಿಕೆ ನೀಡಿದ್ದಾರೆ.