ರಾಮನಗರ: ಕಷ್ಟಪಟ್ಟು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗದ ಹತಾಶೆಯಲ್ಲಿರುವ ರೈತರು ರಸ್ತೆಯಲ್ಲಿ ಟೊಮ್ಯಾಟೊ ಸುರಿದು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಜನರು ಕ್ರೇಟ್ಗಳ ಮೂಲಕ ಟೊಮ್ಯಾಟೊ ತುಂಬಿಕೊಂಡು ಹೋಗುತ್ತಿದ್ದಾರೆ. ಆದರೆ, ಸೂಕ್ತ ಬೆಲೆ ಸಿಗದ ಕಾರಣಕ್ಕೆ ಬೆಳೆಯನ್ನು ರಸ್ತೆಯಲ್ಲಿ ಸುರಿದು ಹೋಗಿದ್ದಾರೆ. ರಾಮನಗರ ತಾಲೂಕಿನ ಲಕ್ಕೊಜನಹಳ್ಳಿ ಗ್ರಾಮದ ರಸ್ತೆಯಲ್ಲಿ ಸುಮಾರು 1 ಟನ್ಗೂ ಹೆಚ್ಚು ಟೊಮ್ಯಾಟೊವನ್ನು ರಸ್ತೆಯ ಪಕ್ಕದಲ್ಲಿ ಸುರಿದು ಹೋಗಿದ್ದಾರೆ. ಒಂದು ಕೆ.ಜಿ ಟೊಮ್ಯಾಟೊ 2-3 ರೂಗೆ ಇಳಿದಿದ್ದು, ಕಷ್ಟಪಟ್ಟು ಸಾಲ ಮಾಡಿ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ ಎಂದು ರೈತರು ಅಸಮಾಧಾನ ತೋರಿಸಿದರು.
ವಿದ್ಯುತ್ ಅಭಾವ, ಕೂಲಿ ಕಾರ್ಮಿಕರ ಅಭಾವದ ನಡುವೆಯೂ ರೈತರು ರಾತ್ರಿ ಹಗಲೆನ್ನದೆ ಬೆಳೆದ ಬೆಳೆಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಕೂಡ ಸಂಕಷ್ಟಕ್ಕೆ ಸ್ಪಂದಿಸಿ ಬೆಂಬಲ ಬೆಲೆ ಘೋಷಣೆ ಮಾಡುವಂತೆ ರೈತರು ಆಗ್ರಹಿಸಿದ್ದಾರೆ.
ಈ ಬಗ್ಗೆ ಚನ್ನಪಟ್ಟಣದ ಸಾಮಾಜಿಕ ಹೋರಾಟಗಾರ ಆರ್.ಸುರೇಶ್ ಎಂಬುವರು ರೈತರ ಕಷ್ಟದ ಬಗ್ಗೆ ವಿಡಿಯೋ ಮಾಡುವ ಮೂಲಕ ಸರ್ಕಾರದ ಸಹಕಾರಕ್ಕೆ ಒತ್ತಾಯಿಸಿದ್ದಾರೆ.