ರಾಮನಗರ: ಸಿಎಂ ಕುಮಾರಸ್ವಾಮಿಯವರ ತವರು ಕ್ಷೇತ್ರ ರಾಮನಗರದಲ್ಲಿ ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗಿ ಶಾಲೆಗಳದ್ದೇ ಆರ್ಭಟವಾಗಿದೆ. ಆರ್‌ಟಿಇ ಮಕ್ಕಳಿಂದ ವಸೂಲಿ ದಂಧೆ ನಿರಂತರವಾಗಿದೆ. ಈ ಸಂಬಂಧ ಹಲವು ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಕಾರ ಇದೀಗ ತನಿಖೆಗೆ ಆದೇಶಿಸಿದೆ.
ಆರ್‌ಟಿಇ ಅಡಿಯಲ್ಲಿ ಉಚಿತವಾಗಿ ದಾಖಲಾದರೂ ಕೂಡ ವಿದ್ಯಾರ್ಥಿಗಳು ಸಾವಿರಾರು ರೂ. ಶುಲ್ಕ ಪಾವತಿಸಲೇಬೇಕು. ಇಲ್ಲದಿದ್ರೆ ಆ ಮಕ್ಕಳಿಗೆ ದಾಖಲಾತಿಯೇ ಸಿಗಲ್ಲ. ಲೆಕ್ಕ ಕೇಳಿದ್ರೆ ಪೋಷಕರನ್ನೇ ಖಾಸಗಿ ಶಾಲಾ ಆಡಳಿತ ಮಂಡಳಿ ದಬಾಯಿಸುತ್ತದೆ. ಮಕ್ಕಳ ಭವಿಷ್ಯಕ್ಕೆ ಕಲ್ಲು ಬೀಳುತ್ತೆ ಅಂತಾ ಪೋಷಕರು ಸಹ ಸುಮ್ಮನಾಗುತ್ತಿದ್ದಾರೆ. ಈ ಸಂಬಂಧ ಲೋಕಾಯುಕ್ತದಲ್ಲಿ ದೂರು ದಾಖಲಾಗಿದ್ದರೂ ಶಾಲೆಗಳು ಮಾತ್ರ ಡೋಂಟ್‌ಕೇರ್ ಎನ್ನುತ್ತಿವೆ.
ಶಾಲೆಗಳಲ್ಲೂ ಬಿಳಿ ಚೀಟಿ ದಂಧೆ:
ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಗೆ ಮಾರುಕಟ್ಟೆಯಲ್ಲಿ ನೀಡುವ ಬಿಳಿ ಚೀಟಿಯಂತೆ ಚಿಕ್ಕಚಿಕ್ಕ ಚೀಟಿಯಲ್ಲಿ ಕೈಬರಹದಲ್ಲಿರುವ ಫೀ ರಿಸಿಪ್ಟ್‌ನ ನೀಡಿ 13 ಸಾವಿರದಿಂದ 15 ಸಾವಿರ ರೂ. ವರೆಗೆ ವಸೂಲಿ ಮಾಡಲಾಗುತ್ತಿದೆ. ಈ ಬಗ್ಗೆ ಪ್ರಶ್ನಿಸಿದ್ರೆ ಇದು ಬುಕ್ ಫೀ, ಬಟ್ಟೆ ಫೀ, ಆಟೋಟದ ಫೀ, ಇತರೆ ಚಟುವಟಿಕೆಗಳ ಫೀ ಅಂತಾ ಹೇಳಿ ತಪ್ಪಿಸಿಕೊಳ್ತಾರೆ. ಸಿಎಂ ತವರು ಜಿಲ್ಲೆಯಲ್ಲಿಯೇ ಇಂತಹ ವಸೂಲಿ ನಡೆಯುತ್ತಿರೋದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಸರ್ಕಾರವೇ ಭರಿಸುತ್ತೆ:
ಆರ್‌ಟಿಇ ಕಾಯ್ದೆಯಡಿಯಲ್ಲಿ ಪ್ರವೇಶ ಪಡೆದ ಮಕ್ಕಳ ಶಾಲಾ ವೆಚ್ಚವನ್ನ ಸರ್ಕಾರವೇ ಪಾವತಿ ಮಾಡುತ್ತಿದೆ. ಆದರೆ, ಹಣದ ದಾಹಕ್ಕೆ ಬಿದ್ದಿರುವ ಖಾಸಗಿ ಶಾಲೆಗಳು ಎಕ್ಸಾಂ, ಸ್ಪೆಷಲ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಸ್ಮಾರ್ಟ್ ಕ್ಲಾಸ್ ಅಂತಾ ಹೇಳಿ ಹಣ ವಸೂಲಿ ಮಾಡ್ತಿವೆ. ಈಗಾಗಲೇ ಬಾದಾಮಿ ತಾಲೂಕಿನಲ್ಲಿ ಕೆಲವು ಖಾಸಗಿ ಶಾಲೆಗಳನ್ನು ಹೆಚ್ಚುವರಿ ಶುಲ್ಕ ವಸೂಲಿ ಮಾಡಿದ್ದಕ್ಕೆ ಲೋಕಾಯುಕ್ತದಲ್ಲಿ ದಾವೆ ಹೂಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾಳೆಯಿಂದ ರಾಮನಗರ ಜಿಲ್ಲೆಯಲ್ಲೂ ನಾಲ್ಕು ತಾಲೂಕುಗಳಲ್ಲಿ ಖಾಸಗಿ ಶಾಲೆಗಳ ಹೆಚ್ಚುವರಿ ಶುಲ್ಕ ವಸೂಲಿ ಬಗ್ಗೆ ದೂರು, ಅಹವಾಲು ಸ್ವೀಕರಿಸಲು ಮಂಡ್ಯ ಡಯಟ್‌ನ ಪ್ರಾಂಶುಪಾಲರು ಭೇಟಿ ನೀಡಲಿದ್ದಾರೆ. ಮಕ್ಕಳ ಭವಿಷ್ಯದಿಂದ ಆತಂಕಕ್ಕೆ ಒಳಗಾಗಿರುವ ಪೋಷಕರು ಮುಕ್ತವಾಗಿ ದೂರು ನೀಡಲು ಸೂಚಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮರಿಗೌಡ ತಿಳಿಸಿದ್ದಾರೆ.
ಅಧಿಕಾರಿಗಳ ವೈಫಲ್ಯ:
ಈ ರೀತಿ ವಸೂಲಿ ಮಾಡಿದ ಹಣದಲ್ಲಿ ಆಯಾ ತಾಲೂಕಿನ ಬಿಇಒ ಹಾಗೂ ಡಿಡಿಪಿಐಗಳಿಗೂ ಮಂತ್ಲಿ ತಲುಪುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಇದಕ್ಕೆಲ್ಲಾ ಪುಷ್ಠಿ ನೀಡುವಂತೆ ಅಧಿಕಾರಿಗಳ ವರ್ತನೆ ಕೂಡ ಇದೆ. ಇನ್ನಾದ್ರೂ ಸಿಎಂ ತಮ್ಮ ತವರು ಜಿಲ್ಲೆಯಲ್ಲಿನ ಖಾಸಗಿ ಶಾಲೆಗಳ ಆರ್ಭಟಕ್ಕೆ ಬ್ರೇಕ್ ಹಾಕಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗಬೇಕೆಂಬುದು ಪೋಷಕರ ಆಗ್ರಹವಾಗಿದೆ.