ರಾಮನಗರ: ನಮ್ಮ ಪಕ್ಷದಿಂದ ರಾಜಕೀಯ ಬದುಕು ಆರಂಭಿಸಿ, ನಂತರ ಅನ್ಯ ಪಕ್ಷಗಳಿಗೆ ಜಿಗಿದು ಕೊನೆಗೆ ಮಾತೃ ಪಕ್ಷದ ವಿರುದ್ಧವೇ ಮಾತನಾಡುವುದು ತೀರಾ ಹಾಸ್ಯಾಸ್ಪದ ಎಂದು ಸಂಸದ ಪ್ರಜ್ವಲ್ ರೇವಣ್ಣ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ದ ಟಾಂಗ್ ನೀಡಿದ್ದಾರೆ.
ಬಿಡದಿಯಲ್ಲಿ ಇಂದು ನಡೆದ ಯುವ ಜೆಡಿಎಸ್ ಕಾರ್ಯಾಗಾರದಲ್ಲಿ ಮುಂದಿನ 2023ರ ಚುನಾವಣೆಯಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತಂದೇ ತರುವುದಾಗಿ ಇಬ್ಬರು ನಾಯಕರು ಶಪಥ ಮಾಡಿದ್ದಾರೆ.
ನಂತರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ದ ನೇರವಾಗಿ ವಾಗ್ದಾಳಿ ನಡೆಸಿದ ಅವರು, ಬೆಳೆದು ಬಂದ ಪಕ್ಷದ ಬಗ್ಗೆ ಅವರು ಮಾತಾಡಬಾರದು. ಕಾಂಗ್ರೆಸ್ ಸರ್ಕಾರದಲ್ಲಿ ರೈತರ ಸ್ಥಿತಿ ಹೇಗಿತ್ತು ಎನ್ನುವುದು ಎಲ್ಲರಿಗೂ ಗೊತ್ತಿದೆ. ಆ ಬಗ್ಗೆ ಅವರು ಮಾತನಾಡಲಿ. ಕುಮಾರಸ್ವಾಮಿ ಅವರ ಸರ್ಕಾರವನ್ನು ಟೀಕೆ ಮಾಡುವ ಸಿದ್ದರಾಮಯ್ಯ ಸರ್ಕಾರದಲ್ಲಿ ರೈತರ ಸ್ಥಿತಿ ಹೇಳತೀರದಾಗಿತ್ತು. ಅದು ಎಲ್ಲರಿಗೂ ಗೊತ್ತಿದೆ ಎಂದರು.
ನಮ್ಮೆಲ್ಲರ ಹಿರಿಯರಾದ ಹೆಚ್.ಡಿ.ದೇವೇಗೌಡರು ಪಕ್ಷವನ್ನು ಯಾವ ರೀತಿ ಕಟ್ಟಿದರು ಅನ್ನೋದನ್ನು ನಾವೆಲ್ಲರೂ ಅರಿಯಬೇಕು. ಪಕ್ಷ ಕಟ್ಟಲು ಎಷ್ಟು ಶ್ರಮ ಪಟ್ಟರು ಎಂಬುದು ನನಗೆ ಗೊತ್ತಿದೆ. ನಮ್ಮದು ಒಂದು ಜಾತಿಗೆ ಸೇರಿದ ಪಾರ್ಟಿಯಲ್ಲ ಎಂದು ತಿಳಿಸಿದರು.
'ನಮ್ಮಲ್ಲಿ ಹೈಕಮಾಂಡ್ ಇಲ್ಲ'
ಸ್ಥಳೀಯವಾಗಿ ನಮ್ಮ ಪಕ್ಷ ಬಲಿಷ್ಠವಾಗಿದೆ. ಇನ್ನಷ್ಟು ಬಲಗೊಳಿಸಲು ಕೆಲಸ ಮಾಡಬೇಕಿದೆ. ಬೇರೆ ಪಕ್ಷದ ವರಿಷ್ಠರನ್ನು ಭೇಟಿ ಮಾಡಲು ದೆಹಲಿಗೆ ಹೋಗಬೇಕು. ಆದರೆ ನಮ್ಮ ಪಕ್ಷದಲ್ಲಿ ವರಿಷ್ಠರನ್ನು ಭೇಟಿ ಮಾಡಬೇಕು ಅಂದರೆ ಬೆಂಗಳೂರು ಸಾಕು ಎಂದು ಪ್ರಜ್ವಲ್ ಎಂದರು.
ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?
ಮುಂದಿನ ಒಂದೂವರೆ ವರ್ಷದಲ್ಲಿ ಇಡೀ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸಂಚರಿಸಿ ಜೆಡಿಎಸ್ ಹಾಗೂ ಯುವ ಜನತಾ ದಳವನ್ನು ಬಲಿಷ್ಠವಾಗಿ ಸಂಘಟನೆ ಮಾಡುವುದಾಗಿ ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಘೋಷಿಸಿದ್ದಾರೆ.
ಪ್ರಪಂಚ ವೇಗವಾಗಿ ಸಾಗುತ್ತಿದೆ. ಸೋಷಿಯಲ್ ಮೀಡಿಯಾ ಬೆರಳ ತುದಿಯಲ್ಲಿ ಇದೆ. ನಾವು ಎಲ್ಲಿ ಎಡವಿದ್ದೇವೆ ಅನ್ನೋದನ್ನು ನೋಡಿಕೊಂಡು ಪಕ್ಷದ ಕೆಲಸ ಮಾಡೋಣ ಎಂದರು.
ನಮ್ಮ ತಂದೆಯ ಬಗ್ಗೆ ಮಗನಾಗಿ ನಾನಿಲ್ಲಿ ಮಾತನಾಡುತ್ತಿಲ್ಲ. ಅವರಿಂದ ನಾನು ಬಹಳಷ್ಟು ಕಲಿತಿದ್ದೇನೆ. ಅವರ ಸರಳತೆ, ತಾಯಿ ಹೃದಯ ಎಲ್ಲರಿಗೂ ಅಚ್ಚುಮೆಚ್ಚು ಮತ್ತು ಅನುಕರಣೀಯ ಎಂದು ಹೇಳಿದರು.
ದೊಡ್ಡಗೌಡರು ಕಷ್ಟಪಟ್ಟು ಈ ಪಕ್ಷ ಕಟ್ಟಿದ್ದಾರೆ. ನಮ್ಮ ತಂದೆಯವರು 15 ವರ್ಷದಿಂದ ಒಬ್ಬರೇ ಈ ಪಕ್ಷ ಉಳಿಸಿಕೊಂಡು ಬಂದಿದ್ದಾರೆ. ಮುಂದಿನ ಚುನಾವಣೆಯಲ್ಲಿ ಒಗ್ಗಟ್ಟಾಗಿ ಎಲ್ಲರೂ ಪಕ್ಷ ಸಂಘಟಿಸಿ ಅಧಿಕಾರಕ್ಕೆ ತರೋಣ ಎಂದು ಕರೆ ನೀಡಿದರು.
ಇದನ್ನೂ ಓದಿ: ಸ್ಮಾರ್ಟ್ ಫೋನ್, ವಾಟ್ಸ್ಆ್ಯಪ್ನಲ್ಲೇ ಅದೃಷ್ಟ ಸಂಖ್ಯೆಯ ಆಟ: ಆನ್ಲೈನ್ ಮಟ್ಕಾ ದಂಧೆಗೆ ಕಡಿವಾಣ ಯಾವಾಗ?